
ಬೆಳಗಾವಿ: ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದ ಪರಿಣಾಮ ಸದಲಗಾ ಪಟ್ಟಣದ ಮೊರಾರ್ಜಿ ವಸತಿ ಶಾಲೆಯ (Morarji Residential School) ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಮೊರಾರ್ಜಿ ವಸತಿ ಶಾಲೆ 7ನೇ ತರಗತಿ ವಿದ್ಯಾರ್ಥಿ ಕೃಷ್ಣಾ ಹೆಗಡೆ (12 ವರ್ಷ) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಹಾಸ್ಟೆಲ್‌ನ ಕೆಲವು ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಬಾಲ್ ತರಲು ಹೋದಾಗ ವಿದ್ಯುತ್ ವೈರ್ ಮೇಲೆ ಕಾಲು ಇಟ್ಟ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ವಿದ್ಯುತ್ ವೈರ್ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ಇರುವುದರಿಂದ ಅವಘಡ ಕಾರಣ ಎಂದು ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಳಿಹಾಳ ಗ್ರಾಮದವನಾದ ಈ ಬಾಲಕ ಎರಡು ವರ್ಷಗಳಿಂದ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸದಲಗಾ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.