ಬೆಂ.ಗ್ರಾ. ಜಿಲ್ಲೆ: ಕುಡಿಯುವ ನೀರಿಗಾಗಿ ಗ್ರಾಮಪಂಚಾಯಿತಿ ವತಿಯಿಂದ ಕೊರೆಸಲಾದ ಬೋರ್ ವೆಲ್ ಗಳಿಗೆ ವಿದ್ಯುತ್ ಸಂಪರ್ಕ ನೀಡದೆ ಇರುವ ಆರೋಪ ಬೆಸ್ಕಾಂ ಇಲಾಖೆಯ ಮೇಲಿದೆ, ಇದರ ಬೆನ್ನಲ್ಲೇ, ಮುಂಬರುವ ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ (K.H. Muniyappa) ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ಇರುತ್ತದೆ. ಈ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಯಾವುದಾದರೂ ಪ್ರದೇಶದಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗಿ ಕೊಳವೆ ಬಾವಿ ಕೊರೆದರೆ, ತಕ್ಷಣವೇ ಒಂದು ವಾರದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಒದಗಿಸಬೇಕು. ಕುಡಿಯುವ ನೀರು ಸಮಸ್ಯೆ ಬಂದಲ್ಲಿ ಡಿಸಿ ಖಾತೆಯಲ್ಲಿ ಹಣ ಇದೆ ತಕ್ಷಣ ಹಣ ಬಿಡುಗಡೆ ಮಾಡಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು.
ಜಾನುವಾರುಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಮೇವಿನ ಸಮಸ್ಯೆ ಉಂಟಾಗಿಲ್ಲ ಎಂದು ಪಶು ಅಧಿಕಾರಿಗಳು ತಿಳಿಸಿದ್ದಾರೆ. ಪಶು ಇಲಾಖೆ, ಕೆಎಂಎಫ್ ಸಹಕಾರದಿಂದ ಬೇಸಿಗೆಯಲ್ಲಿ ನೀರಿರುವ ರೈತರ ಜಮೀನುಗಳಿಗೆ ಉಚಿತವಾಗಿ ಮೇವು ಕಿಟ್ ವಿತರಿಸಲಾಗುವುದು. ಜೊತೆಗೆ ಕಾಲಕಾಲಕ್ಕೆ ಜಾನುವಾರುಗಳಿಗೆ ಲಸಿಕೆ ಹಾಕಲು ಪಶು ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ತಯಾರಿ ನಡೆಸಲಾಗಿದೆ. ಎಲ್ಲಿ ಸರ್ಕಾರಿ ಜಾಗ ಇದೆ ಅಲ್ಲಿ ನಿವೇಶನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ 500 ಕ್ಕಿಂತ ಹೆಚ್ಚು ಸೈಟ್ ಗಳನ್ನು ಸಿದ್ದ ಪಡಿಸಲಾಗಿದೆ. ದೇವನಹಳ್ಳಿಯಲ್ಲಿ ಮುಂದಿನ 15 ದಿನದಲ್ಲಿ 1000 ಸೈಟ್ ಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಸತಿ ಯೋಜನೆಯಡಿ ಜಿಲ್ಲೆಗೆ 2500 ನಿವೇಶನ ಮಂಜೂರು ಆಗಿದೆ. ತಾಲ್ಲೂಕಿಗೆ 500 ರಂತೆ ಹಂಚಿಕೆ ಮಾಡಲಾಗುವುದು. ಮನೆ ಕಟ್ಟಲು ನಿವೇಶನ ಬೇಕು ಹಾಗಾಗಿ ಮೊದಲು ನಿವೇಶನ ಹಂಚಿಕೆಗೆ ಕ್ರಮ ವಹಿಸಲಾಗುವುದು ಎಂದರು.
ಜೆಜೆಎಂ ಕಾಮಗಾರಿಯಿಂದ ಹಳ್ಳಿಗಳಲ್ಲಿ ರಸ್ತೆಗಳು ಹಾಳಾಗಿವೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಕಾಮಾಗಾರಿಗೆ ತೆಗೆದಿರುವ ಗುಂಡಿಗಳನ್ನು 15 ದಿನಗಳೊಳಗೆ ಮುಚ್ಚಲು ಅಧಿಕಾರಿಗಳಿಗೆ ತಿಳಿಸಿದರು.
ಇಂದಿರಾ ಕಿಟ್ ಟೆಂಡರ್ ಹಂತದಲ್ಲಿದ್ದು, ಜನವರಿ ಅಂತ್ಯಕ್ಕೆ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಪಡಿತರ ಅಕ್ಕಿ ಜತೆಗೆ ಇಂದಿರಾ ಕಿಟ್ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ಬೆಂಬಲ ಬೆಲೆ ಯೋಜನೆಯಡಿ ರಾಗಿ ನೋಂದಣಿಗೆ ಜಿಲ್ಲೆಯಲ್ಲಿ ಸುಮಾರು 2500 ರೈತರು ಬಾಕಿ ಉಳಿದಿದ್ದಾರೆ. ಅವರಿಗೆ ಉಪ ಸಮಿತಿಯಲ್ಲಿ ಚರ್ಚಿಸಿ ನಂತರ ತೀರ್ಮಾನಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು ಕೈಗಾರಿಕೆಗಳ ಸಂಖ್ಯೆ ಹಾಗೂ ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಪಟ್ಟಿ ತಯಾರಿಸಿ ತ್ವರಿತವಾಗಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪೋಡಿ ದುರಸ್ತಿಯಲ್ಲಿ 10 ನೇ ಸ್ಥಾನ
ಪಹಣಿ ಆಗಿಲ್ಲ, ಖಾತೆ ಆಗಿಲ್ಲ, ಹದ್ದುಬಸ್ತು ಆಗಿಲ್ಲ ಅಂತ ರೈತರು ನಮ್ಮ ಬಳಿ ಬರ್ತಾರೆ. ಜಿಲ್ಲೆಯು ಪೋಡಿ ದುರಸ್ತಿಯಲ್ಲಿ 10 ನೇ ಸ್ಥಾನದಲ್ಲಿದ್ದು ಪೋಡಿ ದುರಸ್ತಿಯಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಗತಿಯಲ್ಲಿ ಪೋಡಿ ದುರಸ್ತಿ ಆಗಬೇಕು. 2026 ರ ಅಂತ್ಯದ ವೇಳೆಗೆ ಒಂದು ಹಂತಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೆ ಸಿಗಬೇಕು
ಅಧಿಕಾರಿಗಳು, ತಹಶೀಲ್ದಾರ್ ಗಳ ಮೇಲೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಸೌಜನ್ಯದಿಂದ ವರ್ತಿಸುವುದು ಮುಖ್ಯ. ತಹಶೀಲ್ದಾರರು ವಾರಕ್ಕೆ ಎರಡು ದಿನ ಸೋಮವಾರ, ಗುರುವಾರ ಸಾರ್ವಜನಿಕರ ಸಂಪರ್ಕಕ್ಕೆ ಸಿಗಬೇಕು. ಇದರಿಂದ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
ನೆಲಮಂಗಲ ಶಾಸಕರಾದ ಶ್ರೀನಿವಾಸ್ ಎನ್ ಅವರು ಮಾತನಾಡಿ ನೆಲಮಂಗಲ ತಾಲ್ಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರುವುದಿಲ್ಲ, ತ್ಯಾಮಗೊಂಡ್ಲು ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿಂದ ಅಂಬುಲೆನ್ಸ್ ಇಲ್ಲದೇ ರೋಗಿಗಳ ಪರದಾಟ ಅನುಭವಿಸುತ್ತಿದ್ದರು, ನಾನು ಸಂಪರ್ಕಿಸಿದ ನಂತರ ಅಂಬುಲೆನ್ಸ್ ಸೇವೆ ಸರಿಪಡಿಸಿದ್ದಾರೆ. ನೆಲಮಂಗಲದಲ್ಲಿ 31 ವಾರ್ಡ್ಗಳಿದ್ದು, 15 ನ್ಯಾಯಬೆಲೆ ಅಂಗಡಿ ಅವಶ್ಯಕತೆ ಇದೆ ಇದರ ಬಗ್ಗೆ ಕ್ರಮ ವಹಿಸಬೇಕು ಎಂದರು.
ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಉದ್ಘಾಟನೆ ಆಗಿದೆ ಆದರೆ ಇದುವರೆಗೂ ಬೀಗ ತೆಗೆದಿಲ್ಲ, ಅಧಿಕಾರಿಗಳು ಕಚೇರಿಗೆ ಬಂದಿರುವುದಿಲ್ಲ. ಕೂಡಲೇ ಇದರ ಬಗ್ಗೆ ಕ್ರಮ ವಹಿಸಬೇಕು ಎಂದರು.
ದೊಡ್ಡಬಳ್ಳಾಪುರ ಟೌನ್ ನ ಮುತ್ತೂರಿನಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ನಡೆದ ಪಟಾಕಿ ಅವಘಡದಲ್ಲಿ ಮೃತಪಟ್ಟ ಯುವಕರಿಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲಿ, ಜೊತೆಗೆ ತಪ್ಪಿತಸ್ಥರ ವಿರುದ್ಧವಾಗಿ ಯಾವುದೇ ಕಾನೂನು ಕ್ರಮ ಆಗಿಲ್ಲ ಎಂದು ದೊಡ್ಡಬಳ್ಳಾಪುರ ಶಾಸಕರು ಪ್ರಸ್ತಾಪಿಸಿದರು, ಇದಕ್ಕೆ ಎಸ್ಪಿ ಅವರು ಪ್ರತಿಕ್ರಿಯಿಸಿ ಖುದ್ದಾಗಿ ಪ್ರಕರಣದ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ಮೀನು ಮರಿಗಳನ್ನು ವಿತರಣೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ ಹೆಗಡೆ, ಜಿಲ್ಲಾಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷರಾದ ವಿ. ಶಾಂತಕುಮಾರ್, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಎಸ್ಪಿ ಚಂದ್ರಕಾಂತ್, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.