ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಪೂರ್ವ ತಯಾರಿ ಇಲ್ಲದೇ ಬಜೆಟ್ ಸಭೆ (Budget meeting) ನಡೆಸಲಾಗುತ್ತಿದ್ದು, ಸಭೆಯನ್ನು ಮುಂದೂಡಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ ಹಿನ್ನಲೆಯಲ್ಲಿ ನಗರದ ಡಾ.ರಾಜ್‌ಕುಮಾರ್ ಕಲಾಮಂದಿರ (ಪುರಭವನ)ದಲ್ಲಿ ನಗರಸಭೆ (Doddaballapur Municipal Council) ಅಧ್ಯಕ್ಷೆ ಸುಮಿತ್ರ. ಕೆ. ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಬೇಕಿದ್ದ 2026-27ನೇ ಸಾಲಿನ ಆಯ-ವ್ಯಯದ ಸಾರ್ವಜನಿಕ ಸಮಾಲೋಚನೆ ಸಭೆಯನ್ನು ಮುಂದೂಡಿದ ಪ್ರಸಂಗ ನಡೆದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಬಿ.ಎಸ್.ಚಂದ್ರಶೇಖರ್, ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ, ಕಸಾಪ ಮಾಜಿ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಹನುಮಂತರಾಯಪ್ಪ, ಚೌಡರಾಜ್, ಜನಪರ ಮಂಜು, ಮೊದಲಾದವರು ಮಾತನಾಡಿ, ಆಯ-ವ್ಯಯದ ಸಾರ್ವಜನಿಕ ಸಮಾಲೋಚನೆಯನ್ನು ನಿಯಮಾನುಸಾರ ಮಾಡದೇ ನಾಮಕಾವಸ್ತೆ ಮಾಡಲಾಗುತ್ತಿದೆ. ಇಂದಿನ ಸಭೆಗೆ ಸಭೆಯ ಅಜಂಡಾವನ್ನು ತಲುಪಿಸಿಲ್ಲ. ಹಿಂದಿನ ಬಜೆಟ್ ಮೀಟಿಂಗ್‌ನಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಹಿಂದಿನ ಬಜೆಟ್ ನಡಾವಳಿಗಳನ್ನು ನಮಗೆ ತಿಳಿಸಿದರೆ ನಾವು ಮುಂದೆ ಮಾತನಾಡಲು ಅನುಕೂಲವಾಗುತ್ತದೆ. ಸಾರ್ವಜನಿಕ ಸಮಾಲೋಚನೆ ನಂತರ ಹಿಂದಿನ ವರ್ಷ ನಗರಸಭೆ ಅಧ್ಯಕ್ಷರು ಮಂಡಿಸಿದ ಬಜೆಟ್ ನಲ್ಲಿ ಎಷ್ಟು ಅಂಶಗಳು ಜಾರಿಯಾಗಿವೆ ಎನ್ನುವುದರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಿ. ಯಾವುದೇ ಪೂರ್ವ ಸಿದ್ದತೆ ಇಲ್ಲದೇ ನಡೆಸುತ್ತಿರುವ ಈ ಸಭೆಯನ್ನು ಮುಂದೂಡಿ ಎಂದು ಒತ್ತಾಯಿಸಿದರು.
ಪೌರಾಯುಕ್ತ ಆರ್.ಕಾರ್ತಿಕೇಶ್ವರ ಮಾತನಾಡಿ, ಬಜೆಟ್ ಸಾರ್ವಜನಿಕ ಸಮಾಲೋಚನೆ ಸಭೆ ಕುರಿತು ಪ್ರಕಟಣೆ ನೀಡಲಾಗಿದೆ. ಬಜೆಟ್ ಬಗ್ಗೆ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು. ಇಂದು ಸಭೆಯಲ್ಲಿ ನಿಮ್ಮ ಸಲಹೆಗಳನ್ನು ನೀಡಿ. ಆನಂತರ ಮತ್ತೊಂದು ಸಭೆಯಲ್ಲಿ ವಿಷದವಾಗಿ ಚರ್ಚೆ ನಡೆಸೋಣ ಎಂದರು.
ಆದರೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲದೇ ಸಭೆ ನಡೆಸುವುದು ಸಮಂಜಸವಲ್ಲ. ಸಭೆಯನ್ನು ಮುಂದೂಡಿ ಎಂದು ಸಭೆಯಲ್ಲಿದ್ದ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದಾಗ ಸಭೆಯನ್ನು ಮುಂದೂಡಿ, ಮುಂದಿನ ದಿನಾಂಕ ತಿಳಿಸುವುದಾಗಿ, ಪೌರಾಯುಕ್ತ ಆರ್.ಕಾರ್ತಿಕೇಶ್ವರ ತಿಳಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಸುಮಿತ್ರ ಕೆ.ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್. ರವಿಕುಮಾರ್, ಸದಸ್ಯರಾದ, ಟಿ.ಎನ್.ಪ್ರಭುದೇವ್, ಶಿವರಾಜ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.