Daily story: ಕಾಡಿನಲ್ಲಿ ಗಜರಾಜ, ಹೊಟ್ಟೆಯ ಕೆಳಗೆ ಚೂಪಾದ ಕಲ್ಲು ತರಚಿ ಗಾಯವಾಗಿ ಒಂದು ದೊಡ್ಡ ಆಲದಮರದ ಕೆಳಗೆ ಮಲಗಿತ್ತು. ಗಾಯ ಆದ ಜಾಗದಲ್ಲಿ ರಕ್ತ ಸ್ರಾವ ಆಗುತ್ತಿತ್ತು.
ಅದಕ್ಕೆ ಉಪಚಾರ ಮಾಡಲು ಪಶುವೈದ್ಯರನ್ನು ಕರೆಸಲಾಯಿತು. ಪಶುವೈದ್ಯರು ‘ಆನೆಗೆ ಬಹಳ ರಕ್ತ ಹೋಗಿದೆ. ತಕ್ಷಣ ಪ್ರಾಣಿಗಳು ರಕ್ತ ನೀಡಲು ಮುಂದೆ ಬರಬೇಕು’ ಎಂದರು.
ಗಜರಾಜ ಗಾಯಗೊಂಡ ಸುದ್ದಿ ಕೇಳಿ ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಸೇರಿದ್ದವು. ಎಲ್ಲರೂ ತಮ್ಮ ವರ್ಗದಲ್ಲಿ ರಕ್ತ ದಾನ ಮಾಡಲು ಅಭಿಪ್ರಾಯ ಮಂಡಿಸಿದವು.
ಕೀಟಸಂಕುಲದ ಪರವಾಗಿ ಚಿಟ್ಟೆ ತಮಗೆ ಮೊದಲು ರಕ್ತದಾನ ಮಾಡಲು ಅವಕಾಶ ನೀಡಲು ಕೋರಿತು. ಎಲ್ಲಾ ಪ್ರಾಣಿಗಳು ನಗಲು ಪ್ರಾರಂಭಿಸಿದವು. ಬೃಹತ್ ಆಕಾರದ ದೇಹವನ್ನು ಹೊಂದಿರುವ ಗಜರಾಜನಿಗೆ ನಿನ್ನ ರಕ್ತ ಎಲ್ಲಿ ಸಾಲುತ್ತದೆ ಎಂದು ಅಪಹಾಸ್ಯ ಮಾಡಿದವು.
ಪಕ್ಷಿ ಸಂಕುಲದ ಪರವಾಗಿ ಗಿಳಿಯು ರೆಕ್ಕೆಯನ್ನು ರಪ ರಪ ಬಡಿಯುತ್ತಾ ‘ನಾವು ಕೂಡ ಈ ಕಾಡಿನಲ್ಲಿ ಗಜರಾಜನ ಒಡನಾಡಿಗಳು. ಹಾಗಾಗಿ ನಾವೂ ರಕ್ತದಾನ ಮಾಡುತ್ತೇವೆ ಎಂದಿತು. ಮತ್ತೆ ಎಲ್ಲ ಕೆಲವು ಪ್ರಾಣಿಗಳು ನಗಲು ಪ್ರಾರಂಭಿಸಿದವು.
ಗರಿಗಳುಳ್ಳ, ತಕ-ತಕ ಕುಣಿಯುವ, ನಾಟ್ಯ ಪ್ರವೀಣೆ ನವಿಲು ಮತ್ತು ಪ್ರಾಣಿವರ್ಗದಿಂದ ಚಾತುರ್ಯವುಳ್ಳ ನರಿಯು ತನ್ನ ಸೊಂಟವನ್ನು ಸರಿ ಮಾಡಿಕೊಳ್ಳುತ್ತಾ ಎದ್ದು ನಿಂತು, ‘ನಾನು ಎಲ್ಲ ಪ್ರಾಣಿ ವರ್ಗಕ್ಕಿಂತ ಗಾತ್ರದಲ್ಲಿ ಚಿಕ್ಕವರಾದರೂ ಬುದ್ದಿವಂತಿಕೆಯಿಂದ ಶುತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲೆ. ಹಾಗಾಗಿ ನಾನು ರಕ್ತ ಕೊಡುತ್ತೇನೆ’ ಎಂದು ಜಂಬದ ಮಾತು ಹೇಳಿ ತಕ್ಷಣವೇ ‘ನನ್ನನ್ನು ಯಾರೋ ಕರೆಯುತ್ತಿದ್ದಾರೆ’ ಎಂದು ಹೇಳುತ್ತಾ ಆ ಸ್ಥಳದಿಂದ ಜಾಗ ಖಾಲಿ ಮಾಡಿ ಹೊರಟು ಹೋಯಿತು.
ಹಾಗೆಯೇ ಜೇಡ, ಹದ್ದು, ಕಾಗೆ, ಬಲಿಷ್ಠ ಸಿಂಹ, ಹುಲಿ, ಕಾಡು ಕೋಣ, ಕರಡಿ… ಹೀಗೆ ಇನ್ನೂ ಅನೇಕ ಪ್ರಾಣಿಗಳು ಮುಂದೆ ಬರಲಿಲ್ಲ. ಅದೇ ಸಮಯದಲ್ಲಿ ಅತಿಚಿಕ್ಕ ಇರುವೆಗಳು ದಾರಿಯಲ್ಲಿ ಬರಬರನೇ ಓಡುತ್ತಿದ್ದವು. ಅದನ್ನು ಎಲ್ಲಾ ಪ್ರಾಣಿಗಳು ನೋಡಿದವು.
‘ಎಲ್ಲಿಗೆ ಹೊರಟಿರುವೆ ಇರುವೆ?’ ಎಂದು ಮಾತನಾಡಿಸಿದವು. ಆಗ ಒಂದು ಇರುವೆ ಹೇಳಿತು, ‘ನಮ್ಮ ಗಜರಾಜನಿಗೆ ಚೂಪಾದ ಕಲ್ಲು ತರಚಿ, ಗಾಯವಾಗಿ ರಕ್ತ ಹೋಗುತ್ತಿದೆ. ವೈದ್ಯರು ತಕ್ಷಣ ರಕ್ತ ಕೊಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ರಕ್ತ ಕೊಡಲು ಹೊರಟಿದ್ದೇವೆ’ ಎಂದು ಹೇಳಿ ಅಲ್ಲಿಂದು ಹೊರಟು ವೈದ್ಯರ ಬಳಿ ಹೋಗಿ ‘ನಾನು ಗಜರಾಜನಿಗೆ ರಕ್ತ ಕೊಡುತ್ತನೆ. ನನ್ನ ರಕ್ತ ತಗೆದುಕೊಳ್ಳಿ’ ಎಂದು ಹೇಳಿತು. ಆದರೆ ವೈದ್ಯರು ಇರುವೆಯ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಅಪಹಾಸ್ಯ ಮಾಡದೆ ‘ಗಜರಾಜನ ಗಾಯಕ್ಕೆ ಹೊಲಿಗೆ ಹಾಕಿ ರಕ್ತ ಹೋಗುವುದು ನಿಂತಿದೆ. ಅದಕ್ಕೆ ನಿನ್ನ ರಕ್ತದ ಅಗತ್ಯ ಇಲ್ಲ’ ಎಂದು ಹೇಳಿದರು. ಆಗ ಕೆಲವು ಪ್ರಾಣಿಗಳು ನಾವು ಮಾತನಾಡುವುದು ಬಿಟ್ಟು ಧೈರ್ಯದಿಂದ ರಕ್ತ ಕೊಡಲು ವೈದ್ಯರ ಹತ್ತಿರ ಹೋಗಲೇ ಇಲ್ಲ ಎನ್ನುವ ತಪ್ಪಿನ ಅರಿವು ಮಾಡಿಕೊಂಡವು.
ಇರುವೆಯ ಸಾಹಸ ಮತ್ತು ಧೈರ್ಯ ಮೆಚ್ಚಿ ಎಲ್ಲಾ ಪ್ರಾಣಿಗಳು ಕೊಂಡಾಡಿದವು.
ಕೃಪೆ: ಬಸವರಾಜ.ರಾ.ಅಗಸರ ( ಸಾಮಾಜಿಕ ಜಾಲತಾಣ)