ದೊಡ್ಡಬಳ್ಳಾಪುರ: ನಾಡಪ್ರಭು ಕೆಂಪೇಗೌಡ (Kempegowda) ಮತ್ತು ರಾಷ್ಟ್ರಕವಿ ಕುವೆಂಪು (Kuvempu) ಅವರ ಪ್ರತಿಮೆಗಳನ್ನು ನಗರದಲ್ಲಿ ಸ್ಥಾಪಿಸಲು ಸ್ಥಳ ಗುರುತಿಸುವಂತೆ ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಕೆಂಪೇಗೌಡ ಜಯಂತೋತ್ಸವ ಸಮಿತಿ ಕೋರಿಕೆಯ ಮೇರೆಗೆ 2018 ರ ಜುಲೈ 12ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಕಾಂಪೌಂಡ್ ಬಲಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಎಡಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗಳನ್ನು ಸ್ಥಾಪಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು.
ಅಲ್ಲದೆ ಪ್ರತಿಮೆ ಸುತ್ತಲೂ ಹುಲ್ಲು ಬೆಳೆಸಿ ಸುಂದರವಾಗಿಡಲು ನಗರಸಭಾ ನಿಧಿಯಿಂದ ಭರಿಸಲು ಸಭೆಯಲ್ಲಿ ನಿರ್ಣಯಿಸಿತ್ತು.
ಆದರೆ ನಂತರ ನಡೆದ ಕೆಲವು ವಿಷಯಗಳ ಗೊಂದಲಗಳಿಂದಾಗಿ ಸ್ಥಳವನ್ನು ಮಾತ್ರ ನಗರಸಭೆಯಿಂದ ನೀಡುವಂತೆ ಮತ್ತು ಪ್ರತಿಮೆಗಳನ್ನು ಒಕ್ಕಲಿಗರ ಸಂಘದಿಂದ ನಿರ್ಮಾಣ ಮಾಡುವ ಬಗ್ಗೆ ತೀಮಾನಿಸಲಾಯಿತು.
ಆದರೆ ಇಲ್ಲಿಯವರೆಗೂ ಪ್ರತಿಮೆಗಳ ನಿರ್ಮಾಣಕ್ಕೆ ನಗರಸಭೆಯಿಂದ ಸ್ಥಳ ಗುರುತಿಸಿಕೊಡುವ ಕಾರ್ಯವಾಗಿಲ್ಲ. ಆದ್ದರಿಂದ ಆದಷ್ಟು ಬೇಗ ಪ್ರತಿಮೆಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗ ಯುವ ವೇದಿಕೆಯ ಸದಸ್ಯರಾದ ಜಿಟಿ ರವಿಕುಮಾರ್, ಮನೋಹರ್ ಎಂಸಿ, ಹೆಚ್ ಮನಿಪಾಪಯ್ಯ, ನಾಗೇಶ್, ಡಿ ಕ್ರಾಸ್ ಹರ್ಷ ಇದ್ದರು.