ದೊಡ್ಡಬಳ್ಳಾಪುರ (Doddaballapura): ದೊಡ್ಡಬಳ್ಳಾಪುರ ಸೇರಿದಂತೆ ದೇಶಾದ್ಯಂತ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಈದ್ ಉಲ್ ಫಿತ್ತರ್ ಆಚರಿಸುತ್ತಿದ್ದಾರೆ.
ರಂಜಾನ್ ಉಪವಾಸದ ಕೊನೆಯ ದಿನ ಮುಸ್ಲೀಮರು, ಶಾಂತಿ ಮತ್ತು ಭ್ರಾತೃತ್ವದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಿದ್ದು, ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ತೆರಳಿ, ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಮುಗಿಯುತ್ತಲೇ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ನಗರದ ಇಸ್ಲಾಂಪುರದ ಮೆಕ್ಕಾ ಮಸೀದಿ, ದರ್ಗಾಜಾಮೀಯ ಮಸೀದಿ, ಚಿಕ್ಕಪೇಟೆಯಲ್ಲಿನ ನೂರುಲ್ ಉದಾ ಮಸೀದಿ, ಕುಂಬಾರಪೇಟೆಯ ಜಾಮೀಯ ಮಸೀದಿ, ಕೋಟೆ ರಸ್ತೆಯ ಮ್ಸಜಿದೇ ಜಾಮೀಯ ಮಸೀದಿ, ರಾಜೀವ್ ಗಾಂಧಿ ಬಡಾವಣೆಯಲ್ಲಿನ ಮ್ಸಜಿದೇ ನೂರ್.
ದೊಡ್ಡಬಳ್ಳಾಪುರ ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲದ ಮದೀನಾ, ಪುಟ್ಟಯ್ಯನ ಅಗ್ರಹಾರದ ಮ್ಸಜಿದೇ ನೂರಾನಿ ಮಸೀದಿ, ತೂಬಗೆರೆ ಮ್ಸಜಿದೇ ನಿಮ್ರಾ ಮಸೀದಿ, ಮುತ್ತೂರು ಮ್ಸಜಿದೇ ಮುನೆವಾರ, ಪ್ಲಾಂಟೇಷನ್ ಬಿಲಾಲ್ ಮಸೀದಿ, ಹಮಾಮ್ ಸೇರಿದಂತೆ ಎಲ್ಲ ಮಸೀದಿಗಳಲ್ಲಿಯೂ ರಂಜಾನ್ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ.
ಮುಸ್ಲಿಂ ಬಾಂಧವರು ಇಫ್ತಿಯಾರ್ ಕೂಟಗಳನ್ನು ಆಯೋಜಿಸುತ್ತಿರುವುದು ಸಾಮಾನ್ಯವಾಗಿದೆ.
ರೋಜಾ (ಉಪವಾಸ) ಆಚರಣೆ
ರಂಜಾನ್ ತಿಂಗಳ 26ನೇ ದಿನ ಕುರಾನ್ ಗ್ರಂಥದ ಪಠಣ ಮುಕ್ತಾಯವಾಗುತ್ತದೆ. ಅಂದು ಇಡೀ ರಾತ್ರಿ ಜಾಗರಣೆಯಿಂದಿದ್ದು, ಕುರಾನ್ ಪಠಣ ಕೇಳುತ್ತೇವೆ. ರಾತ್ರಿ ಪ್ರಾರ್ಥನೆ ಮಾಡಿದರೆ ದೇವರು ಸಂತುಷ್ಟನಾಗಿ ಬೇಡಿದ್ದನ್ನು ಕರುಣಿಸುತ್ತಾನೆಂಬ ನಂಬಿಕೆ.
ಕುರಾನ್ ಪಠಣದ ನಂತರ ಸಿಹಿ ಹಂಚಲಾಗುತ್ತದೆ.
ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿ ರಂಜಾನ್ ತಿಂಗಳಲ್ಲಿ ಮಹಿಳೆಯರು ಸೇರಿದಂತೆ ಎಲ್ಲರು ರೋಜಾ (ಉಪವಾಸ) ಆಚರಣೆ ಮಾಡುತ್ತಾರೆ ಎನ್ನುತ್ತಾರೆ ಶಿಕ್ಷಕ ದಾದಾಪೀರ್.