Daily story: ಭೀಷ್ಮನಿಗೆ ಮಾನವ ಜನ್ಮದಿಂದ ಮುಕ್ತಿಕೊಡುವ ಆ ದಿನ ಬಂದೊದಗಿದ ಕೂಡಲೆ ಪಾಂಡವರು ಧೃತರಾಷ್ಟ್ರನನ್ನೂ ಕೃಷ್ಣನನ್ನೂ ಮುಂದಿಟ್ಟುಕೊಂಡು, ಗಂಧ ಧೂಪ ದೀಪ ಪುಷ್ಪಗಳನ್ನೂ ರತ್ನಾಭರಣಗಳನ್ನೂ ತೆಗೆದುಕೊಂಡು ರಣರಂಗದಲ್ಲಿ ಭೀಷ್ಮನು ಶರಶಯ್ಯೆಯಲ್ಲಿ ಮಲಗಿದ್ದ ಕಡೆಗೆ ನಡೆದರು. ಅವರೊಡನೆ ಕುಂತಿ, ಗಾಂಧಾರಿ, ದ್ರೌಪದಿ, ಸಾತ್ಯಕಿ, ವಿದುರ, ಯುಯುತ್ಸು ಮೊದಲಾದವರೂ ಹೋದರು.
ಭೀಷ್ಮನ ಸುತ್ತಲೂ ವ್ಯಾಸರು, ನಾರದರು, ಪರಾಶರರು ಮೊದಲಾದ ಋಷಿಗಳು ನೆರೆದಿದ್ದರು.
ಅಜ್ಜನಿಗೆ ನಮಸ್ಕಾರಿಸಿದ ಯುಧಿಷ್ಠಿರನು: “ದೇವ, ನಾನು ಪಾಂಡವನಾದ ಯುಧಿಷ್ಟಿರ, ನನ್ನ ಸಹೋದರರನ್ನು, ನಿನ್ನ ಪ್ರೀತಿಪಾತ್ರರನ್ನೂ ಕರೆತಂದಿದ್ದೇನೆ. ನಿನ್ನನ್ನು ಗೌರವಿಸಲು ಇಡೀ ಹಸ್ತಿನಾವತಿಯೇ ಇಲ್ಲಿಗೆ ಬಂದಿದೆ. ಧೃತರಾಷ್ಟ್ರ, ಕೃಷ್ಣರೂ ಬಂದಿದ್ದಾರೆ. ದಯವಿಟ್ಟು ಕಣ್ಣು ತೆರೆದು ನೋಡು” ಎಂದನು.
ಕಣ್ತೆರೆದು ಎಲ್ಲರನ್ನೂ ನೋಡಿದ ಭೀಷ್ಮರು: “ಮಗು, ಈ ಸಮಸ್ತರ ಜೊತೆಗೆ ನಿನ್ನನ್ನು ನೋಡಲು ಸಂತೋಷವಾಗುತ್ತಿದೆ. ಕೊನೆಗೂ ಉತ್ತರಾಯಣ ಬಂದಿತ್ತಲ್ಲವೇ! ಶರಶಯ್ಯೆಯಲ್ಲಿ ಮಲಗಿ ನೂರಾರು ವರ್ಷಗಳಾದಂತೆ ಅನಿಸುತ್ತಿದೆ. ಮಾಘಮಾಸ ಬಂದಿದೆ. ನಾನು ಈ ಭೂಮಿಯನ್ನು ಬಿಡುವ ಕಾಲ ಸನ್ನಿಹಿತವಾಯಿತು !” ಎಂದನು.
ಆಮೆಲೆ ಧೃತರಾಷ್ಟ್ರನಿಗೆ, ಭೀಷ್ಮನು: “ಮಗನೇ, ನಿನಗೆ ರಾಜನ ಕರ್ತವ್ಯಗಳೆಲ್ಲವೂ ತಿಳಿದಿವೆ. ನಿನಗೆ ಗೊತ್ತಿಲ್ಲದಿರುವುದು ಯಾವುದೂ ಇಲ್ಲ. ವಿವೇಕಿಯಾದ ನೀನು ನಿನ್ನ ಮಕ್ಕಳ ಸಾವಿಗೆ ಶೋಕಿಸಬಾರದು. ಪಾಂಡವರೂ ನಿನ್ನ ಮಕ್ಕಳೆ, ನಿನ್ನ ಮೇಲೆ ಭಕ್ತಿಯಿಂದಿದ್ದಾರೆ. ಅವರೊಡನೆ ಸುಖವಾಗಿರು” ಎಂದನು.
ನಂತರ ಅವನ ದೃಷ್ಟಿ ಕೃಷ್ಣನ ಕಡೆಗೆ ಹೊರಳಿತು. ಪುಷ್ಪಗಳನ್ನು ತರಿಸಿ, ಅವುಗಳಿಂದ ಅವನನ್ನು ಭಕ್ತಿಯಿಂದ ಪೂಜಿಸಿದ
ಭೀಷ್ಮರು: “ಕೃಷ್ಣಾ, ನೀನು ಜಗತ್ತಿಗೆಲ್ಲ ಈಶನು. ಪುರುಷವೆನ್ನಿಸಿಕೊಳ್ಳುವ ನೀನೆ ಇಡೀ ವಿಶ್ವದ ಸೃಷ್ಟಿಕರ್ತನು. ನೀನೇ ಪರಮಾತ್ಮನು. ನಿನ್ನ ವಿಶ್ವರೂಪವನ್ನು ತೋರಿಸಿ, ನನಗಿನ್ನು ಮನುಷ್ಯ ಜನ್ಮವನ್ನು ತೊರೆದು ಈ ಲೋಕವನ್ನು ಬಿಟ್ಟುಹೋಗಲು ಅಪ್ಪಣೆ ಕೊಡು. ನಿನ್ನ ಕೃಪೆಯಿಂದ ನನಗೆ ಉತ್ತಮ ಗತಿ ದೊರೆಯಲಿ” ಎನ್ನಲು.
ಕೃಷ್ಣನು ಅವನಿಗೆ “ವಿಶ್ವರೂಪ”ವನ್ನು ದರ್ಶನ ಮಾಡಿಸಿದನು.
ಅನಂತರ ಕೃಷ್ಣನು:- “ದೇವವ್ರತ, ನಿನ್ನ ನಿಜ ಧಾಮಕ್ಕೆ ಇನ್ನು ಹೊರಡು. ಹೋಗಿ ವಸುಗಳನ್ನು ಸೇರಿಕೋ. ಮಾರ್ಕಂಡೇಯನಂತೆ ನಿನಗೆ ಪುನರ್ಜನ್ಮವಿಲ್ಲ. ಮೃತ್ಯುವು ಸೇವಕನಂತೆ ನಿನ್ನ ಅಣತಿಗಾಗಿ ಕಾದಿರುವನು. ನೀನು ಅವನನ್ನು ಕರೆಯಬಹುದು” ಎಂದನು.
ಭೀಷ್ಮನ ಮುಖವು ದೇದೀಪ್ಯಮಾನವಾಯಿತು. ಅವನು ಕಣ್ಣು ಮುಚ್ಚಿ, ಕೆಲವು ಕ್ಷಣಗಳು ಸುಮ್ಮನಿದ್ದನು. ಸ್ವಲ್ಪ ಪ್ರಯತ್ನಿಸಿ ಸಾಯಲು ಇಚ್ಛೆಪಟ್ಟನು. ಜ್ವಾಲೆಯೊಂದು ಅವನ ಶರೀರವನ್ನು ಬಿಟ್ಟು ಅಂತರಿಕ್ಷಕ್ಕೆ ಏರಿದ್ದು ಸುತ್ತಲಿದ್ದವರಿಗೆ ಕಾಣಿಸಿತು.
ದೇವದುಂದುಭಿಗಳು ಮೊಳಗಿದವು. ತಂಪಾದ, ಸುಗಂಧಭರಿತ ಗಾಳಿಯು ಬೀಸಿತು. ಭೂಮಿಯು ಪ್ರಶಾಂತವಾಯಿತು. ಎಲ್ಲರ ಮನಸ್ಸು ಶಾಂತಿಯಿಂದ ತುಂಬಿಹೋಯಿತು. ಶರಗಳ (ಬಾಣಗಳ) ಸಮೇತವಾಗಿ ಅವನ ಶರೀರವನ್ನು ಗಂಧದ ಚಿತೆಯ ಮೇಲಿಟ್ಟು, ಯುಧಿಷ್ಠಿರನು, ವಿದುರನೂ ಪುಷ್ಪಗಳಿಂದ ಮುಚ್ಚಿದರು. ಯುಯುತ್ಸುವು ಶ್ವೇತಚ್ಛತ್ರವನ್ನು ಹಿಡಿದನು. ಬ್ರಾಹ್ಮಣರು ಸಾಮಗಾನ ಮಾಡುತ್ತಿರಲು, ಧೃತರಾಷ್ಟ್ರನು ಚಿತೆಗೆ ಅಗ್ನಿಸ್ಪರ್ಶ ಮಾಡಿದನು.
ಮಾರನೆಯ ದಿನ ಚಿತಾಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಿದರು.
ಮೇಲೆದ್ದು ಬಂದ ಗಂಗೆಯು
“ಭಾರ್ಗವನನ್ನು ಸೋಲಿಸಿದ ವೀರನಾದ ನನ್ನ ಮಗು ಶಿಖಂಡಿಯಿಂದ ಕೊಲ್ಲಲ್ಪಟ್ಟನು. ನನ್ನ ದಯ ಇನ್ನೂ ಒಡೆಯದಿರುವುದರಿಂದ ಅದು ಕಲ್ಲಿನದಾಗಿರಬೇಕು” ಎಂದು ಗೋಳಿಟ್ಟಳು.
ಗಂಗೆಯನ್ನು ಕುರಿತು ಕೃಷ್ಣನು: “ತಾಯಿ, ಸಮಾದಾನ ಮಾಡಿಕೋ. ನಿನ್ನ ಮಗನು ವಸುಗಳನ್ನು ಸೇರಿರುವನು. ಅವನು ಸಾಮಾನ್ಯ ಮಾನವನಲ್ಲ” ಎಂದು ಸಮಾದಾನ ಮಾಡಿದನು.
ಗಂಗೆ ಅದೃಷ್ಯಳಾದಳು. ನದಿಯು ಅನಾದಿಕಾಲದಿಂದಲೂ ಹರಿಯುವಂತೆಯೇ ಹರಿಯಲಾರಂಭಿಸಿತು. ದಯದಲ್ಲಿ ಶೋಕ ಸಂತೋಷಗಳೆರಡೂ ಒಟ್ಟಾಗಿ ಸೇರಿರಲು. ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಿದರು.
ಬರಹ: ಗಣೇಶ ಗೋಸಾವಿ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						