ದೊಡ್ಡಬಳ್ಳಾಪುರ (Harithalekhani): ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು (Rain), ನಗರದ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬೇಸಿಗೆ ಬೇಗೆಗೆ ತತ್ತರಿಸಿದ್ದ ಜನತೆ ಶುಕ್ರವಾರ ಸಂಜೆ ಸುರಿದ ಮಳೆ ಅಲ್ಪ ತಂಪಾದ ವಾತಾವರಣ ನೀಡಿದಾಗ್ಯೂ, ಶನಿವಾರ ಮತ್ತೆ ಬೇಸಿಗೆ ಬಿಸಿಗೆ ಜನತೆ ತತ್ತರಿಸುತ್ತಿದ್ದಾರೆ.
ಶುಕ್ರವಾರ ತಾಲೂಕಿನಲ್ಲಿ 17.76 ಮಿಮೀ ಮಳೆಯಾಗಿದ್ದು, ಅತಿ ಹೆಚ್ಚು 36.8 ಮಿಮೀ ಸಾಸಲು ಹೋಬಳಿಯಲ್ಲಿ ಸುರಿದಿದೆ ಎಂದು ಮಾಹಿತಿ ತಿಳಿದುಬಂದಿದೆ.
ಮಳೆ, ಗಾಳಿಯ ಕಾರಣ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಸೆಕೆಗೆ ಪರದಾಡುವಂತಾಗಿತ್ತು.
ವರದಿ ಅನ್ವಯ ಕಸಬಾ ಹೋಬಳಿಯಲ್ಲಿ 16.2 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 8.8 ಮಿಮೀ, ಮಧುರೆ ಹೋಬಳಿಯಲ್ಲಿ 5.4 ಮಿಮೀ, ಸಾಸಲು ಹೋಬಳಿಯಲ್ಲಿ 36.8 ಮಿಮೀ, ತೂಬಗೆರೆ ಹೋಬಳಿಯಲ್ಲಿ 21.6 ಮಿಮೀ ಮಳೆಯಾಗಿದೆ.
ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ನಾಳೆಯಿಂದ (ಏ.20) ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆ ತೆಲಂಗಾಣ, ತಮಿಳುನಾಡು, ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಹಾವೇರಿ, ಚಿತ್ರದುರ್ಗ, ಇಳಕಲ್, ತ್ಯಾಗರ್ತಿ, ಆನವಟ್ಟಿಯಲ್ಲಿ ಮಳೆಯಾಗಿದೆ.
ವಿಜಯಪುರ ಜಿಲ್ಲೆಗೆ ನಿನ್ನೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ.