ದೊಡ್ಡಬಳ್ಳಾಪುರ: ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸೂಕ್ತ ಸ್ಥಳ ನೀಡದೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದೆ ಇರುವ ತಾಲ್ಲೂಕು ಆಡಳಿತದ ಕಾರ್ಯವೈಖರಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ (Karave kannadigara bana) ವತಿಯಿಂದ ಬಸ್ ನಿಲ್ದಾಣ ಸಮೀಪದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶನಿವಾರ ಅರೆಬೆತ್ತಲೆಯಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಖಂಡಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ನಗರದಲ್ಲಿ 2013ರಲ್ಲಿ ಪ್ರಾರಂಭವಾಗಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಕೋರ್ಸ್ಗಳು ಸೇರ್ಪಡೆಯಾಗುತ್ತಲೇ ಇವೆ.
ನಗರದಲ್ಲಿ ಮಹಿಳಾ ಕಾಲೇಜು ಸ್ಥಾಪನೆಯಾಗಲು ಕಾರಣರಾದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಹೊಸ ಕೋರ್ಸ್ಗಳನ್ನು ತರುತ್ತಿರುವ ಹಾಲಿ ಶಾಸಕ ಧೀರಜ್ ಮುನಿರಾಜು ಅವರು ಕಾಲೇಜಿಗೆ ಮೂಲಭೂತವಾಗಿ ಅಗತ್ಯ ಇರುವ ಸ್ಥಳ ಹಾಗೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಾತ್ರ ಆದ್ಯತೆ ನೀಡುತ್ತಿಲ್ಲ.
ಪ್ರೌಢ ಶಾಲಾ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ವಂತ ಕಟ್ಟಡ ಇಲ್ಲದೇ ಇರುವ ಕಾರಣಕ್ಕೆ ವಿದ್ಯಾರ್ಥಿನಿಯರ ದಾಖಲಾತಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.