ದೊಡ್ಡಬಳ್ಳಾಪುರ: ಜೂನ್ 07 ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು (Bakrid) ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲು ಮುಸ್ಲಿಂ ಬಾಂಧವರು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ನಡುವೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರು, ಹಬ್ಬದ ವೇಳೆ ಯಾವುದೇ ವದಂತಿಗಳನ್ನು ನಂಬದೆ, ಅವಘಡಗಳಿಗೆ ಅವಕಾಶ ನೀಡದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ವದಂತಿ, ಅಹಿತಕರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು.
ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಧರ್ಮದ ಹಬ್ಬ ಹರಿದಿನವಾಗಲಿ, ಮತ್ತೊಂದು ಧರ್ಮದವರಿಗೆ ತೊಡಕು ಉಂಟಾಗದ ರೀತಿಯಲ್ಲಿ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಪಿಎಸ್ಐ ಚಂದ್ರಕಲಾ, ರೇವಣ್ಣ, ಪೊಲೀಸ್ ಸಿಬ್ಬಂದಿಗಳಾದ ಚಂದ್ರಶೇಖರ್, ರಮೇಶ್, ಸಂಗೀತ, ಮಂಜುನಾಥ್ ಮತ್ತಿತರರಿದ್ದರು.