ದೊಡ್ಡಬಳ್ಳಾಪುರ: ಖಾಸಗಿ ವ್ಯಕ್ತಿಗಳು ಲೇಔಟ್ ನಿರ್ಮಿಸುವ ಸಲುವಾಗಿ ಸರ್ಕಾರಿ ಜಮೀನು ಕಬಳಿಸಲು ಮುಂದಾಗಿದ್ದಾರೆಂದು ಆರೋಪಿಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ (Rajaghatta Ravi) ನೇತೃತ್ವದಲ್ಲಿ ಕಾರ್ಯಕರ್ತರು ನಡೆಸಿದ ಹೋರಾಟಕ್ಕೆ ಯಶಸ್ಸು ದೊರೆತಿದೆ.
ಹೌದು ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿ ಅರ್ಕಾವತಿ ದೇವಾಲಯದ ಜಮೀನಿಗೆ ಹೊಂದಿ ಕೊಂಡಂತಿರುವ ಈ ಜಮೀನು ಸರ್ಕಾರಿ ಬಂಡೆ ಖರಾಬು ಜಮೀನಾಗಿದೆ. ಈ ಜಾಗದಲ್ಲಿದ್ದ ಬಂಡೇ ರಾತ್ರೋ ರಾತ್ರಿ ಕಾಣೆಯಾಗಿದ್ದು, ಇಲ್ಲಿದ್ದ ಮರಗಳನ್ನು ಕಡಿದು, ರಾಜ ಕಾಲುವೆಯನ್ನು ಮುಚ್ಚಲಾಗಿತ್ತು.
ಈ ಜಮೀನು ಹೆದ್ದಾರಿಗೆ ಕಾಣುತ್ತಿದ್ದು, ಎಲ್ಲಾ ಅಧಿಕಾರಿಗಳು ಅದರ ಮೇಲೆಯೇ ಓಡಾಡುತ್ತಾರೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಣ್ಣು ಕಾಣಿಸ್ತಾ ಇಲ್ಲ. ಯಾರಾದ್ರೂ ಅಮಾಯಕರು 10 ಅಡಿ, 5 ಅಡಿ ತಿಳಿಯದೆ ಮನೆ ಕಟ್ಟಿದ್ದರೆ, ಅಲ್ಲಿಗೆ ಬಂದು ದರ್ಪ ತೋರಿಸಲು ಮಾತ್ರ ಸೀಮಿತವಾಗಿದ್ದಾರೆ.
ಕೂಡಲೇ ತಾಲೂಕು ಆಡಳಿತ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಜಮೀನು ಹಾಗೂ ಇಲ್ಲಿರುವ ವಾಹನಗಳನ್ನು ವಶಕ್ಕೆ ಪಡೆದು, ರಕ್ಷಿಸಬೇಕೆಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಒತ್ತಾಯಿಸಿದರು.
ಈ ತೀವ್ರ ಹೋರಾಟಕ್ಕೆ ಮಣಿದ ದೊಡ್ಡಬಳ್ಳಾಪುರ ತಾಲೂಕು ಆಡಳಿತ ಕೊನೆಗೂ ಸರ್ಕಾರಿ ಜಮೀನು ಉಳಿಸುವಲ್ಲಿ ಹೋರಾಟಗಾರರ ಜತೆ ಕೈಜೋಡಿಸಿದ್ದು, ಬಂಡೆ ಸ್ಪೋಟಿಸಿದ ಆರೋಪಿಗೆ ದಂಡ ವಿಧಿಸಿದ್ದಾರೆ.
ಅಲ್ಲದೆ ಈ ಜಾಗವನ್ನು ಸರ್ವೆ ಮಾಡಿಸಿ, ಸರ್ಕಾರಿ ಜಾಗವೆಂದು ಫಲಕ ಅಳವಡಿಸಿದ್ದಾರೆ. ಈ ಮೂಲಕ ಕೋಟ್ಯಾಂತರ ಬೆಲೆ ಬಾಳುವ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗುವುದು ತಪ್ಪಿದೆ.
ಈ ವೇಳೆ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ರಾಜಘಟ್ಟರವಿ ಮತ್ತಿತರರಿದ್ದರು.