ದೊಡ್ಡಬಳ್ಳಾಪುರ: ಕನ್ನಡ ಸುಗಮಸಂಗೀತಕ್ಕೆ ಅತ್ಯುತ್ತಮ ಭಾವಗೀತೆಗಳನ್ನು ನೀಡಿದವರು ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ( Dr. H.S.Venkateshamurthy) ಆಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ (Prof. KR Ravikiran) ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತಿಗಳಯಾವ ಪಂಥಕ್ಕೂ ಸೇರದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ ಸೃಜನಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದವರು. ಕಾವ್ಯ, ನಾಟಕ, ವಿಮರ್ಶೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ಮುಂತಾದ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದರು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ನಂ.ಮಹಾದೇವ ಮಾತನಾಡಿ, ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರ ಬುದ್ಧಚರಣ ಮಹಾಕಾವ್ಯ ಗಮಕವಾಚನ ಮತ್ತು ಗೀತಗಾಯನದ ಮೂಲಕ ಸಹೃದಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಮಹಾಕಾವ್ಯ ಪರಂಪರೆಯನ್ನು ಮುಂದುವರಿಸಿದ ಕವಿ ಎಲ್ಲಾ ವಯೋಮಾನದ ಓದುಗರಿಗೂ ಪ್ರೀತಿ ಪಾತ್ರರಾಗಿದ್ದರು ಎಂದರು.
ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸುಗಮಸಂಗೀತ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಐದು ಬೆರಳು ಕೂಡಿ ಒಂದು ಮುಷ್ಟಿಯು ಹಲವು ಮಂದಿ ಸೇರಿ ಈ ಸಮಷ್ಟಿಯು ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು” ಎಂದು ಬರೆದ ಈ ಹಾಡು ರಾಷ್ಟ್ರೀಯ ಭಾವನೆಗಳನ್ನು ತೋರಿಸುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಗಾಯಕ ಸಿ.ಅಶ್ವಥ್ ಮತ್ತು ಕವಿ ಎಚ್.ಎಸ್.ವೆಂಕಟೇಶಮೂರ್ತಿ ಜೋಡಿ ಕನ್ನಡ ಭಾವಗೀತೆ ಮೂಲಕ ಜನಪ್ರಿಯರಾದವರು. ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ ಹೊಂದಿದ್ದ ಅವರು ಚಲನಚಿತ್ರಗಳಿಗೆ ರಚಿಸಿದ ಹಾಡುಗಳು, ಸಂಭಾಷಣೆ. ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ. ಭಾವಗೀತೆಗಳ ಧ್ವನಿ ಸುರಳಿಗಳಿಗೆ ರಚಿಸಿದ ಹಾಡುಗಳು ಕನ್ನಡಿಗರ ಮನಗೆದ್ದಿವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಸೂರ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ಸಿ.ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ.
ಜ್ಞಾನಗಂಗಾ ಪ್ರೌಢಶಾಲೆ ಶಿಕ್ಷಕ ಕೋದಂಡರಾಮ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಾಸಲು ಹೋಬಳಿ ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ನಾಗರತ್ನಮ್ಮ, ಷಫೀರ್, ಕಲಾವಿದ ಬಾಶೆಟ್ಟಿಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.