ಬೆಂಗಳೂರು: “ಬೇರೆಯವರು ಯಾವಾಗ ಕಣ್ಣೀರು ಹಾಕಿದ್ದಾರೆ, ಎಷ್ಟು ಕುಟುಂಬಗಳ ಕಣ್ಣೀರು ಹಾಕಿಸಿದ್ದಾರೆ, ಎಷ್ಟು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ ಎಂದು ಅಧಿವೇಶನದಲ್ಲಿ ಚರ್ಚೆ ಮಾಡೋಣ” ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕೇಂದ್ರ ಸಚಿವ ಕುಮಾರಸ್ವಾಮಿಗೆ (HD Kumaraswamy) ತಿರುಗೇಟು ನೀಡಿದ್ದಾರೆ.
ನೆಹರೂ ತಾರಾಲಯ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
“ಇಮೇಜ್ ಪಡೆಯಲು ಹೋಗಿ ಡ್ಯಾಮೇಜ್ ಮಾಡಿದ್ದಾರೆ” ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ನನಗೆ ಯಾವುದೇ ಇಮೇಜ್ ಅವಶ್ಯಕತೆ ಇಲ್ಲ. ಜನರು ಕೊಟ್ಟಿರುವ ಇಮೇಜ್ ನಮಗೆ ಬೇಕಾದಷ್ಟಿದೆ. ಆರ್ ಸಿಬಿ ಗೆದ್ದ ಖುಷಿಯಲ್ಲಿ ಯುವ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಬಯಸಿದ್ದರು. ಅದಕ್ಕೆ ಬಿಜೆಪಿ, ಜೆಡಿಎಸ್ ಏನೆಲ್ಲಾ ಟ್ವೀಟ್ ಮಾಡಿದ್ದರು, ಆಮೇಲೆ ಹೆಂಗೆ ಉಲ್ಟಾ ಹೊಡೆದರು ಎಂಬುದನ್ನು ಬಿಚ್ಚಿಡಲಿ. ಅವರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಅಂತ ಹೀನ ರಾಜಕಾರಣ ಮಾಡುವುದಿಲ್ಲ. ನಮಗೆ ಪ್ರಾಮಾಣಿಕತೆ ಇದೆ” ಎಂದು ತಿರುಗೇಟು ನೀಡಿದರು.
“ನಾನು ಭಾವುಕನಾಗಿದ್ದಕ್ಕೆ ಕಣ್ಣಲ್ಲಿ ನೀರು ಬಂದಿತು. ಅದನ್ನು ಟೀಕೆ ಮಾಡಿದ್ದಾರೆ, ಪರವಾಗಿಲ್ಲ. ಇವರು ಯಾವ, ಯಾವ ಸಂದರ್ಭದಲ್ಲಿ, ಎಲ್ಲೆಲ್ಲಿ ಕಣ್ಣೀರಾಕಿದ್ದಾರೆ? ಅವು ಏನಾದವು? ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿ ಸುರಿಸಿದ ಕಣ್ಣೀರು ಏನಾಯ್ತು? ಎಷ್ಟು ಕುಟುಂಬಗಳು ಕಣ್ಣೀರು ಹಾಕಿದ್ದವು? ಇವರು ಎಷ್ಟು ಕುಟುಂಬಗಳ ಕಣ್ಣೀರು ಒರೆಸಿದ್ದಾರೆ? ಈ ಎಲ್ಲಾ ವಿಚಾರಗಳನ್ನು ಇಲ್ಲಿ ಮಾತನಾಡಿದರೆ ಎಲ್ಲರೂ ಮರೆತುಬಿಡುತ್ತಾರೆ. ಅಧಿವೇಶನದಲ್ಲಿ ಚರ್ಚೆ ಮಾಡಲಿ, ಆಲ್ಲಿ ಮಾತನಾಡಿದರೆ ದಾಖಲೆಗಳು ಶಾಶ್ವತವಾಗಿ ಉಳಿಯುತ್ತವೆ. ನನ್ನ ವಿರುದ್ಧ ಬೆಟ್ಟುಮಾಡಿ ತೋರಲು ಏನಿದೆ? ಈ ಪ್ರಕರಣಕ್ಕೆ ನಾನು ಹೇಗೆ ಜವಾಬ್ದಾರನಾಗುತ್ತೀನಿ?” ಎಂದು ಪ್ರಶ್ನಿಸಿದರು.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ವಿರೋಧ ಪಕ್ಷಗಳು ನಿಮ್ಮ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಕೇಳಿದಾಗ, “ಪಾಪ ವಿರೋಧ ಪಕ್ಷದವರು ಕೇಳುತ್ತಿದ್ದಾರೆ ಕೇಳಲಿ ಬಿಡಿ. ರಾಜೀನಾಮೆ ನೀಡಿ ಅವರ ಆಸೆ ಈಡೇರಿಸೋಣ” ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ನೀವು ಹೆಚ್ಚು ಉತ್ಸಾಹ ತೋರಿರುವುದಕ್ಕೆ ಈ ರೀತಿ ಹೇಳುತ್ತಿದ್ದಾರೆಯೇ ಎಂದು ಕೇಳಿದಾಗ, ಕೆಎಸ್ ಸಿಎ ಅವರು ಈ ಕಾರ್ಯಕ್ರಮ ಮಾಡಿದರು. ನಾನು ಬೆಂಗಳೂರು ನಗರದ ಸಚಿವ. ಕೆಲವು ಅಧಿಕಾರಿಗಳು ಪರಿಸ್ಥಿತಿ ಗಂಭೀರವಾಗುತ್ತಿದೆ. 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಬೇಕು ಎಂದು ಕೇಳಿಕೊಂಡರು. ಹೀಗಾಗಿ ನಾನು ಕ್ರೀಡಾಂಗಣಕ್ಕೆ ಹೋಗಿದ್ದೆ. ಅದರಲ್ಲಿ ತಪ್ಪೇನಿದೆ? ನಾನು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೋಗಿ ಆಟಗಾರರಿಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದೆ. ಪೊಲೀಸ್ ಅಧಿಕಾರಿಗಳು ಬಹಿರಂಗ ಮೆರವಣಿಗೆಗೆ ಅವಕಾಶ ಬೇಡ ಎನ್ನುತ್ತಿದ್ದಾರೆ ಎಂದು ಅವರ ಜತೆ ಚರ್ಚೆ ಮಾಡಿದೆ. ಅವರಿಗೆ ಪರಿಸ್ಥಿತಿ ವಿವರಿಸಿದೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಮಧ್ಯಾಹ್ನ 3.30 ಕ್ಕೆ ಅಭಿಮಾನಿಗಳು ಮೃತರಾಗಿದ್ದರೂ ಕಾರ್ಯಕ್ರಮ ಮುಂದುವರಿಸಿರುವ ಬಗ್ಗೆ ಕೇಳಿದಾಗ, “ಆ ಸಮಯದಲ್ಲಿ ನನಗೆ ದುರ್ಘಟನೆ ಬಗ್ಗೆ ಮಾಹಿತಿ ಇರಲಿಲ್ಲ” ಎಂದು ಸ್ಪಷ್ಟಪಡಿಸಿದರು.
“ನೀವು ರಾಜೀನಾಮೆ ನೀಡುವ ಬದಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ” ಎಂಬ ಟೀಕೆ ಬಗ್ಗೆ ಕೇಳಿದಾಗ, “ಯಾರು ಯಾವ ಯಾವ ಸಮಯದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ಆಮೇಲೆ ಮಾತನಾಡೋಣ. ಜನಸಾಮಾನ್ಯರ ಹಿತದೃಷ್ಟಿಯಿಂದ ನಮ್ಮ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಅವರು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದಾರೆ. ಯಾರೋ ತಮ್ಮ ಚಟಕ್ಕೆ ಮಾತನಾಡುತ್ತಾರೆ ಎಂದು ನಾವು ಅದನ್ನು ಕೇಳಲು ಆಗುವುದಿಲ್ಲ. ಜನ ನಮಗೆ ಆಶೀರ್ವಾದ ಮಾಡಿದ್ದು, ನಾವು ಜನರಿಗೆ ಉತ್ತರ ನೀಡುತ್ತೇವೆ” ಎಂದರು.
ಕುಮಾರಸ್ವಾಮಿಗೂ ನಮಗೂ ಬಹಳ ಲವ್
“ಕುಮಾರಸ್ವಾಮಿ ಅವರು ನಿಮ್ಮನ್ನೇ ಯಾಕೆ ಗುರಿ ಮಾಡುತ್ತಿದ್ದಾರೆ” ಎಂದು ಕೇಳಿದಾಗ, “ನನ್ನನ್ನು ಕಂಡರೆ ಅವರಿಗೆ ಬಹಳ ಪ್ರೀತಿ. ನಮಗೂ ಅವರಿಗೂ ಬಹಳ ಲವ್ ಇದೆ. ಅದಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ರಾಜೀನಾಮೆ ಕೊಡೋಣ” ಎಂದರು.
“ನಿಮ್ಮ ವಿರುದ್ಧ ಜಂಟಿ ಹೋರಾಟ ಮಾಡುತ್ತಾರಂತೆ” ಎಂದು ಕೇಳಿದಾಗ, “ಅವರು ಯಾವತ್ತು ಜಂಟಿ ಬಿಟ್ಟಿದ್ದಾರೆ? ಅವರು ಸದಾ ಜಂಟಿಯಾಗಿಯೇ ಇದ್ದಾರೆ. ಚುನಾವಣೆ ನಂತರ ಅವರು ಯಾವಾಗಲೂ ಜಂಟಿಯಾಗೇ ಇದ್ದಾರಲ್ಲವೇ? ಇನ್ನು 10 ಜನರನ್ನು ಹೆಚ್ಚಿಗೆ ಸೇರಿಸಿಕೊಳ್ಳಲಿ. ತೆರೆಮರೆ ಹಿಂದೆ ಯಾರ್ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ. ದೇವರು ನಮಗೆ ಅಲ್ಪಸ್ವಲ್ಪ ಜ್ಞಾನ ಕೊಟ್ಟಿದ್ದಾನೆ” ಎಂದು ತಿಳಿಸಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						