ಬೆಂಗಳೂರು: ಡಾ.ರಾಜ್‌ಕುಮಾರ್ (Rajakumar) ತೀರಿಕೊಂಡಾಗ ಅಭಿಮಾನಿಗಳಿಗೆ ಗುಂಡು ಹೊಡೆಸಿದ್ರಲ್ಲ, ಶೂಟ್ ಮಾಡಿಸಿದ್ದರು ಆಗ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ (HD Kumaraswamy) ರಾಜೀನಾಮೆ ಕೊಟ್ರಾ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopala Krishna ) ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತ ಘಟನೆ ಕುರಿತು ಸಿಎಂ, ಡಿಸಿಎಂ ರಾಜೀನಾಮೆಗೆ ದೋಸ್ತಿ ನಾಯಕರ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಇಂತಹ ಘಟನೆ ಆಗಬಾರದಿತ್ತು, RCB ಅಭಿಮಾನಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ ಎಂಬುದು ತಿಳಿಯಲಾಗದೆ ಆಗಿಹೋಗಿದೆ. ಅದಕ್ಕೆ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯ ನೇಮಕ ಹಿಂಪಡೆಯಲಾಗಿದೆ.
ಸಿಎಂ, ಡಿಸಿಎಂ ಇಬ್ರೂ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಇವೆಲ್ಲ ಆಕಸ್ಮಿಕ ಘಟನೆ, ನಾವೂ ಕೂಡ ನೋವಲ್ಲಿ ಇದ್ದೇವೆ. ಗೊಂದಲ ಸೃಷ್ಟಿ ಮಾಡಬಾರದು.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಮಂದಿ ಸಾವನಪ್ಪಿದ್ದಾರೆ, ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ಆಗಿ ಹಲವರು ಸತ್ರು ಪ್ರಧಾನಿ ಮೋದಿ (Narendra modi), ಅಮಿತ್ ಶಾ ರಾಜೀನಾಮೆ ನೀಡಿದ್ರಾ..?, ಕೊಡ್ಸಿ ಮೋದಿ, ಶಾ ರಾಜೀನಾಮೆ, ನಾವು ಕೊಡುಸ್ತೀವಿ.
ರಾಜೀನಾಮೆ ಕೇಳುವ ಕುಮಾರಸ್ವಾಮಿ (HD Kumaraswamy) ಅವರಿಗೆ ನಾಚಿಕೆ ಆಗಬೇಕು. ಡಾ. ರಾಜ್‌ಕುಮಾರ್ ತೀರಿಕೊಂಡಾಗ ನಾಲ್ಕು ಜನರಿಗೆ ಗುಂಡೇಟು ಹೊಡೆಸಿದ್ರು. ಕಂಠೀರವ ಸ್ಟುಡಿಯೋದಲ್ಲಿ ಆಗ ನಾನೂ ಇದ್ದೆ. ಆಗ ಕುಮಾರಸ್ವಾಮಿ ರಾಜೀನಾಮೆ ನೀಡಿದ್ರಾ..?
ಹಾವೇರಿಯಲ್ಲಿ ರೈತರ ಮೇಲೆ ಬಿಎಸ್‌ವೈ ಗೋಲಿಬಾರ್ ಮಾಡಿಸಿದ್ರು, ರಾಜೀನಾಮೆ ನೀಡಿದ್ರಾ..? ಕೊಡಿಸಲಿ, ನಾವೂ ಕೂಡ ಸಿಎಂ, ಡಿಸಿಎಂ ರಾಜೀನಾಮೆ ಕೊಡಿಸ್ತೀವಿ ಅಂತ ಹೇಳಿದ್ದಾರೆ.
ಮೃತರಿಗೆ 10 ಲಕ್ಷ ರೂ. ಪರಿಹಾರ ಸಾಕಾಗಲ್ಲ, ಕನಿಷ್ಠ 50 ಲಕ್ಷ ರೂ. ಕೊಡಬೇಕು. ನಾನೂ ಕೂಡ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡ್ತೀನಿ. ಸತ್ತವರ ಕುಟುಂಬಸ್ಥರನ್ನ ಇಟ್ಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ.
ಮೋದಿ ರಾಜೀನಾಮೆ ಕೊಟ್ಟರೆ ನಾವೂ ರಾಜೀನಾಮೆ ಕೊಡಿಸುತ್ತೇವೆ. ಮೋದಿ, ಶಾ ರಾಜೀನಾಮೆ ಕೊಡಿಸಲು ತಾಕತ್ತು ಇದ್ಯಾ? ಕುಂಭಮೇಳದಲ್ಲಿ ಎಷ್ಟು ಜನ ಸತ್ತರು? ಬೆಂಕಿ ಹಚ್ಚೋ ಕೆಲಸ ಮಾಡಬಾರದು ಎಂದರು.