ನಿಕೋಸಿಯಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸೋಮವಾರ ಸೈಪ್ರಸ್ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಗ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ I ಆಫ್ ಸೈಪ್ರಸ್ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಗೌರವಿಸಿದ್ದಾರೆ.
ಸೈಪ್ರಸ್ ಮೊದಲ ಅಧ್ಯಕ್ಷ ಮಕರಿಯೋಸ್‌ರ ನೆನಪಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ಗೌರವ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಶಸ್ತಿಯನ್ನು ಬಹಳ ವಿನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ. ನಾನು ಅದನ್ನು ಎರಡು ರಾಷ್ಟ್ರಗಳ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಪಹಲ್ಗಾಮ್ ಅಮಾಯಕರ ಮೇಲಿನ ಭಯೋತ್ಪಾದಕ ದಾಳಿಯನ್ನು ಸೈಪ್ರಸ್ ಖಂಡಿಸಿದ್ದಕ್ಕಾಗಿ ಮೋದಿ ಕೃತಜ್ಞತೆ ವ್ಯಕ್ತಪಡಿಸಿದರು.
ಮೋದಿಯವರ ಈ ಭೇಟಿ ಅವಧಿಯಲ್ಲಿ ಭಾರತ-ಮಧ್ಯೆಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ಕುರಿತಾದ ಮಹತ್ವದ ಚರ್ಚೆ ನಡೆದಿದೆ. ಹಾಗೆಯೇ ಮಾದಕದ್ರವ್ಯ ಕಳ್ಳಸಾಗಾಣಿಕೆ ಹಾಗೂ ಶಸ್ತ್ರಾಸ್ತ್ರ ಸಾಗಾಣಿಕೆ ತಡೆಯುವ ಬಗ್ಗೆ ಉಭಯತ್ರರರು ತೀರ್ಮಾನ ಕೈಗೊಂಡಿದ್ದಾರೆ. ಇದಲ್ಲದೆ, ಪಿನ್‌ಟೆಕ್, ರಕ್ಷಣಾ, ಭದ್ರತೆ, ವಾಣಿಜ್ಯ, ಸೈಬರ್ ಸೆಕ್ಯೂರಿಟಿ, ನವೀಕರಿಸಬಹುದಾದ ಇಂಧನ, ನಾವೀನ್ಯತೆ, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ನೀಡುವುದಕ್ಕೂ ನಿರ್ಧರಿಸಿದ್ದಾರೆ.
ಬಳಿಕ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌ ಲಿಡೆಸ್, ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಇರಾನ್ ನಡುವಿನ ಸಮರದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
‘ಇದು ಯುದ್ಧದ ಯುಗವಲ್ಲ’ ಎಂದು ಉಭಯ ನಾಯಕರು ಸಂದೇಶ ನೀಡಿದರು. ಮಾತುಕತೆ ಮತ್ತು ಸ್ಥಿರತೆ ಮರುಸ್ಥಾಪನೆ ಮೂಲಕ ಪರಿಹಾರ ಕಂಡುಕೊಳ್ಳುವುದು ಮಾನವೀಯ ನಡೆಯಾಗಿದೆ ಎಂದರು.