ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 132 ಮಂದಿ ಶಿಕ್ಷಕರ (Teacher) ಹುದ್ದೆ ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ತೀವ್ರತರವಾದ ಆತಂಕ ಎದುರಾಗಿದೆ.
ಈ ನಿಟ್ಟಿನಲ್ಲಿ ಹರಿತಲೇಖನಿ (Harithalekhani) ವರದಿಗೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ (Rajaghatta Ravi) ಪ್ರತಿಕ್ರಿಯೆ ನೀಡಿದ್ದು, ಶಿಕ್ಷಣ ಇಲಾಖೆ ಹಾಗೂ ದೊಡ್ಡಬಳ್ಳಾಪುರ ಚುನಾಯಿತ ಜನಪ್ರತಿನಿದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಇವೆರಡು ನೀಡಬೇಕಾದ್ದು, ಸರ್ಕಾರಗಳ ಕರ್ತವ್ಯ. ಆದರೆ ಇವೆರಡನ್ನು ಬಿಟ್ಟು ಉಳಿದಲ್ಲವನ್ನು ಮಾಡಲಾಗುತ್ತಿದೆ.
ಸರ್ಕಾರಗಳು ಶಿಕ್ಷಕರ ಮೇಲೆ ಮಾಡಿದ ಪ್ರಯೋಗ ಮತ್ಯಾವುದೇ ಇಲಾಖೆ ಮೇಲೆ ಮಾಡುತ್ತಿಲ್ಲ. ಬಿಸಿ ಊಟ, ಬಾಳೆಹಣ್ಣು, ಮೊಟ್ಟೆ, ಜನ ಗಣತಿ, ಜಾತಿ ಗಣತಿ, ಮತದಾರರ ಸರ್ವೆ ಎಂಬತೆ ಪಾಠ ಮಾಡಿಸುವುದೊಂದು ಬಿಟ್ಟು ಮಿಕ್ಕಿದೆಲ್ಲದಕ್ಕೂ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ.
ದೊಡ್ಡಬಳ್ಳಾಪುರದಲ್ಲಿ ಮಿತಿಮೀರಿದ ಶಿಕ್ಷಕರ ಕೊರತೆ ಇದ್ದಾಗಿಯೂ ಶಿಕ್ಷಣ ಇಲಾಖೆ, ಚುನಾಯಿತ ಜನಪ್ರತಿನಿದಿಗಳು ಕ್ರಮಕೈಗೊಳ್ಳದೆ ಇರುವುದು ನಾಚಿಕೆ ಗೇಡಿನ ಸಂಗತಿ. SSLC ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೊನೆಯ ಸ್ಥಾನ ಎಂದರೆ ಇವರಿಗೆ ನಾಚಿಗೆ ಆಗಬೇಕು.
ಈ ರೀತಿ ಕ್ರಮಕೈಗೊಳ್ಳದೆ ಉಳಿಯುವುದಾದರೆ ಶಿಕ್ಷಣ ಇಲಾಖೆ ಅಗತ್ಯವೇ ಇಲ್ಲ. ಶಿಕ್ಷಣ ಇಲಾಖೆ ಕರ್ತವ್ಯ ಅಗತ್ಯ ಶಿಕ್ಷಕರನ್ನು ನೇಮಿಸುವುದು. ಆದರೆ ಆ ಕೆಲಸ ಆಗುತ್ತಿಲ್ಲ. ಅನೇಕ ಅನುದಾನಿತ ಶಾಲೆಗಳು ಈಗಾಗಲೇ ಮುಚ್ಚುವ ಹಂತಕ್ಕೆ ಬಂದಿದ್ದು ಖಾಸಗಿ ಶಾಲೆಗಳಾಗಿ ಮಾರ್ಪಾಡು ಬಡ ಜನರಿಂದ ಸುಲಿಗೆ ಮಾಡು ಹಂತಕ್ಕೆ ಬಂದಿದೆ.
ಇನ್ನೂ ಕರವೇ ತಾಳ್ಮೆಯಿಂದ ಇರಲು ಸಾಧ್ಯವಿಲ್ಲ. ಏನ್ ದೊಡ್ಡಬಳ್ಳಾಪುರದಲ್ಲಿ ಹೇಳುವವರು ಇಲ್ಲ ಎಂಬ ನಿಲವೇ..? ಕೂಡಲೇ ಅತಿಥಿ ಶಿಕ್ಷಕರಿಗೆ ಮಾತ್ರ ಸೀಮಿತವಾಗದೇ, ಅಗತ್ಯ ಶಿಕ್ಷಕರ ನೇಮಕಕ್ಕೆ ಮುಂದಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಬಿಇಒ ಕಚೇರಿಗೆ ಬೀಗ ಜಡಿದು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜಘಟ್ಟರವಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಗಳಲ್ಲಿ 132 ಶಿಕ್ಷಕರ ಕೊರತೆ.. ಪೋಷಕರಲ್ಲಿ ಹೆಚ್ಚಾದ ಆತಂಕ