ದೊಡ್ಡಬಳ್ಳಾಪುರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಸೇವೆ ಸಲ್ಲಿಸುತ್ತಿರುವ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಸಾಧಕರಿಗೆ ಅಚ್ಚರಿ ಎಂಬಂತೆ ಸರಣಿ ರಾಜ್ಯ ಪ್ರಶಸ್ತಿ (State Awards) ದೊರಕುತ್ತಿದೆ.
ಇತ್ತೀಚೆಗಷ್ಟೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸೇವೆಗೆ ಹರಿತಲೇಖನಿ ಮುಖ್ಯ ಸಂಪಾದಕ ಕೆ.ಎಂ. ಸಂತೋಷ್ (K.M. Santhosh) ಆರೂಢಿ ಅವರಿಗೆ ರಾಜ್ಯಮಟ್ಟದ ಛಾಯರತ್ನ ಪ್ರಶಸ್ತಿ ದೊರೆತ ಬೆನ್ನಲ್ಲೇ, ಶಿಕ್ಷಣ, ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗೆ ಆರೂಢಿ ಭಾಸ್ಕರ್ (Bhaskar) ಅವರಿಗೆ ಬಸವಶ್ರೀ ರಾಜ್ಯ ಪ್ರಶಸ್ತಿ ದೊರೆತಿದೆ.
ಬಳಿಕ ನಿನ್ನೆಯಷ್ಟೇ ಬಿಡುಗಡೆಯಾದ ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ಸಾಲಿನ ಅಕಾಡೆಮಿಯ ಪಟ್ಟಿಯಲ್ಲಿ ಚನ್ನವೀರನಹಳ್ಳಿಯ ಶಿಕ್ಷಕ, ನಾಟಕಕಾರ ಸಿ.ವಿ. ಲೋಕೇಶ್ (C.V. Lokesh) ಅವರಿಗೆ ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರದ ಮನ್ನಣೆ ದೊರೆತಿದೆ.
ಇದರ ಬೆನ್ನಲ್ಲೇ ಕರ್ನಾಟಕ ಡ್ರೈವರ್ಸ್ ಅಂಡ್ ಓನರ್ಸ್ ವೆಲ್ ಫೇರ್ ಅಸೋಸಿಯೇಷನ್ (ರಿ) ಮತ್ತು ರಂಗ ವಿಜಯ ಟ್ರಸ್ಟ್ ವತಿಯಿಂದ ಆಯೋಜಿಲಾಗುತ್ತಿರುವ ದಶಮಾನೋತ್ಸವ ಮಹಾ ಸಂಗಮ ಕಾರ್ಯಕ್ರಮದಲ್ಲಿ ರಂಗ ಭೂಮಿಯ ಸೇವೆಯಲ್ಲಿ ನಿರಂತರ ಕೃಷಿ ಮಾಡುತ್ತಿರುವ ರಂಗಕರ್ಮಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ (Chinnuprakash) ಅವರಿಗೆ ಜನೋಪಕಾರಿ ದೊಡ್ಡಣ್ಣ ಶೆಟ್ಟರ ಸ್ಮಾರಕ ಪ್ರಶಸ್ತಿ ದೊರೆತಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ. 28 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಈ ಮೂಲಕ ಒಂದು ತಿಂಗಳ ಅಂತರದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ನಾಲ್ಕು ಮಂದಿ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಂತಾಗಿದೆ.