ಬಳ್ಳಾರಿ: ಗಂಡ-ಹೆಂಡತಿ ಜಗಳದ ರಾಜಿ ಸಂಧಾನಕ್ಕೆ ಮುಂದಾಗಿದ್ದ ದಾಗಿದ್ದ ಬಾಮೈದ (ಹೆಂಡತಿಯ ತಮ್ಮ)ನನ್ನು ಬಾವ (ಅಕ್ಕನ ಗಂಡ) ಕೊಚ್ಚಿಕೊಂದಿರೋ (killed) ಘಟನೆ ತಾಲೂಕಿನ ಎತ್ತಿನಬೂದಿಹಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೃತ ದುರ್ದೈವಿಯನ್ನು ಮಹೇಶ (27 ವರ್ಷ) ಎಂದು ಗುರುತಿಸಲಾಗಿದ್ದು, ಬಸವರಾಜ (45 ವರ್ಷ) ಹತ್ಯೆ ಆರೋಪಿ ಬಾವ.
ಕಳೆದ 20 ವರ್ಷಗಳ ಹಿಂದೆ ಮಹೇಶ ತನ್ನ ಅಕ್ಕ ಪದ್ಮಾವತಿಯನ್ನ ಬಸವರಾಜ ಎಂಬುವನಿಗೆ ಕೊಟ್ಟು ಮದ್ದೆ ಮಾಡಿದ್ದನಂತೆ.
ಇಬ್ಬರು ಒಂದೇ ಗ್ರಾಮದವರಾದ ಹಿನ್ನೆಲೆ ಅಕ್ಕಪಕ್ಕದ ಏರಿಯಾದಲ್ಲಿರುತ್ತಿದ್ದರು. ಆದರೆ, ಮದುವೆಯಾದಾಗಿನಿಂದಲೂ ಬಸವರಾಜ್ ಮತ್ತು ಪದ್ಮಾವತಿ ನಿತ್ಯ ಜಗಳವಾಡುತ್ತಿದ್ದರಂತೆ. ಈ ಬಗ್ಗೆ ರಾಜಿ ಪಂಚಾಯಿತಿ, ಸಂಧಾನ ಎಲ್ಲವೂ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಶುಕ್ರವಾರ ಕೂಡ ಗಂಡ-ಹೆಂಡತಿ ಮಧ್ಯೆ ಜಗಳವಾಗಿತ್ತು. ಹೀಗಾಗಿ ಮಹೇಶ್ ತನ್ನ ಅಕ್ಕಳನ್ನು ಬಳ್ಳಾರಿಗೆ ಕರೆದುಕೊಂಡು ಬಂದು ಮಹಿಳಾ ಠಾಣೆಯಲ್ಲಿ ದೌರ್ಜನ್ಯದ ಕೇಸ್ ದಾಖಲು ಮಾಡಿದ್ದ. ಇದರಿಂದ ಆಕ್ರೋಶಗೊಂಡ ಬಸವರಾಜ್ ಶುಕ್ರವಾರ ತಡರಾತ್ರಿ ಮಹೇಶ್ ಮಲಗಿದ್ದಾಗ ಅವನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಚ್ಚಿಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.