ಬೆಂಗಳೂರು: ಸಂಘಟನೆಗಳಲ್ಲಿನ ಭಿನ್ನಾಭಿಪ್ರಾಯ, ಹೈಕೋರ್ಟ್ ಆದೇಶದ ನಡುವೆಯೂ ನಡೆಸಲಾದ ಸಾರಿಗೆ ಮುಷ್ಕರ (transport strike) ಕೇವಲ 10 ಗಂಟೆಗಳ ಅವಧಿಯಲ್ಲಿಯೇ ಅಂತ್ಯಗೊಂಡಿದೆ.
ಹೌದು ನ್ಯಾಯಾಲಯದ ಸ್ಪಷ್ಟ ಆದೇಶದ ಹೊರತಾಗಿಯೂ ಮುಷ್ಕರಕ್ಕೆ ಕರೆ ನೀಡಿದ್ದ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನೌಕರರ ಮುಷ್ಕರ ಒಂದೇ ದಿನಕ್ಕೆ ವಾಪಸ್ ಪಡೆಯಲಾಗಿದೆ.
ಹೈಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೆಲ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಮುಷ್ಕರವನ್ನು ಬೆಂಬಲಿಸಿದ್ದರು. ರಾಜಧಾನಿ ಬೆಂಗಳೂರು ಶೇ.50 ಸೇರಿದಂತೆ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸರಕಾರಿ ಬಸ್ ಗಳಿಲ್ಲದೇ ಸಾರಿಗೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಹೈಕೋರ್ಟ್ ಈ ವಿಷಯ ವನ್ನು ಗಂಭೀರವಾಗಿ ಪರಿಗಣಿಸಿ, ‘ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಸಾರಿಗೆ ನೌಕರರ ಸಂಘಟನೆ ಮುಷ್ಕರಕ್ಕಿಳಿದು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಿದೆ. ಒಂದು ವೇಳೆ ಮುಷ್ಕರ ನಿಲ್ಲಿಸದಿದ್ದರೆ ಪದಾಧಿಕಾರಿಗಳನ್ನು ಬಂಧಿಸಲು ಸೂಚಿಸುತ್ತೇವೆ’ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ ಕಾರಣ ಮಧ್ಯಾಹ್ನ 3.40ರ ವೇಳೆಗೆ ಮುಷ್ಕರ ಹಿಂಪಡೆಯಲಾಯಿತು.
ಬಳಿಕ ಮುಷ್ಕರ ಹಿಂಪಡೆಯುವುದಾಗಿ ಲಿಖಿತ ವಿವರಣೆ ನೀಡಲಾಗಿದೆ. ಇದರ ಬೆನ್ನಲ್ಲೇ ಅನಂತ ಸುಬ್ಬರಾವ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಷ್ಕರ ತೀರ್ಮಾನಿಸಲಾಯಿತು.
ಸಂಘಟನೆಗಳಲ್ಲಿ ಒಡಕಿನ ಕಾರಣ ಅನೇಕ ಜಿಲ್ಲೆಗಳಲ್ಲಿ ಸಾರಿಗೆ ಬಸ್ಸುಗಳು ಸಂಚರಿಸಿದರೆ, ಮತ್ತೆ ಕೆಲವು ಜಿಲ್ಲೆಗಳಲ್ಲಿ ಸ್ಥಗಿತಗೊಂಡಿದ್ದವು.
ತಡೆ ತೆರವಾದರೆ 8ರಿಂದ ಮುಷ್ಕರ
ಮುಷ್ಕರಕ್ಕೆ ಆ.7ರವರೆಗೆ ಹೈಕೋರ್ಟ್ ನೀಡಿರುವ ತಡೆ ತೆರವುಗೊಳಿಸಿದರೆ ಆ.8 ರಿಂದ ಮತ್ತೆ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ. ಹೀಗಾಗಿ ಮುಷ್ಕರದ ಭವಿಷ್ಯ ಮುಂದಿನ ಹೈಕೋರ್ಟ್ ಆದೇಶದ ಮೇಲೆ ನಿಂತಿದೆ.