ನವದೆಹಲಿ: ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ವಿಧಿಸಿರುವ ಶೇ. 50 ರಷ್ಟು ತೆರಿಗೆ ಬೆನ್ನಲ್ಲೇ, ಶುಕ್ರವಾರ ಅಮೆರಿಕದ ಡಾಲರ್ (Dollar) ಎದುರು ಭಾರತದ ರುಪಾಯಿ (Rupee) ಮೌಲ್ಯ 88.29ಕ್ಕೆ ಇಳಿದು ಸಾರ್ವಕಾಲಿಕ ಕನಿಷ್ಠ ದರವನ್ನು ದಾಖಲಿಸಿರುವುದು ಚಿಂತೆಗೆ ಕಾರಣವಾಗಿದೆ. ಇದಕ್ಕೂ ಮೊದಲು ರುಪಾಯಿ 87.95 ದಾಖಲಿಸಿದ್ದು ಈ ಹಿಂದಿನ ಕನಿಷ್ಠ ದರವಾಗಿತ್ತು.
ಆದಾಗ್ಯೂ ಅಮೆರಿಕದ ಸುಂಕ ಸಮರ ಮತ್ತು ಇತರ ಆರ್ಥಿಕ ಬಿಕ್ಕಟ್ಟುಗಳ ನಡುವೆಯೂ 2025ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆ ಸಾಧಿಸಿದೆ.
ಅಮೆರಿಕದ ದಂಡನಾತ್ಮಕ ಸುಂಕಗಳು ಜಾರಿಗೆ ಬಂದ ಬೆನ್ನಿಗೇ, ಯುಎಸ್ ಡಾಲರ್ ವಿರುದ್ದ ರೂಪಾಯಿ ಮೌಲ್ಯ 88.29ಕ್ಕೆ ಇಳಿದು, ಫೆಬ್ರವರಿಯ ಹಿಂದಿನ ಕನಿಷ್ಠ 87.95 ರು. ದಾಟಿದೆ.
ಆರ್‌ಬಿಐ ಡಾಲರ್ ಮಾರಾಟ ಮಾಡಿದ ನಂತರ ಶುಕ್ರವಾರ ಮಧ್ಯಾಹ್ನ 2:10 ಕ್ಕೆ ಡಾಲರ್ ವಿರುದ್ದ 88.12ಕ್ಕೆ ಸ್ಥಿರಗೊಳ್ಳುವ ಮೂಲಕ ಕರೆನ್ಸಿ ಭಾಗಶಃ ಚೇತರಿಸಿಕೊಂಡಿದೆ. 2025 ರಲ್ಲಿ ರೂಪಾಯಿ ಮೌಲ್ಯ ಶೇ.3ರಷ್ಟು ಕುಸಿದಿದ್ದು ಏಷ್ಯಾದಲ್ಲಿ ಅತಿ ಹೆಚ್ಚು ಕುಸಿತ ಕಂಡ ಕರೆನ್ಸಿಯಾಗಿದೆ.