ದೊಡ್ಡಬಳ್ಳಾಪುರ: ಮುಸ್ಲಿಂ ಬಾಂಧವರ ಪವಿತ್ರ ಈದ್ ಮಿಲಾದ್ (Eid Milad) ಅನ್ನು ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು.
ಶಾಂತಿದೂತ ಮಾನವತಾವಾದಿ ವಿಶ್ವ ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯಗಳನ್ನು ಕೋರುವ ಮೂಲಕ ಸಂಭ್ರಮಿಸಿದರು.
ಮಸೀದಿಗಳಲ್ಲಿ ಕುರಾನ್ ಪಾರಾಯಣ ಆಚರಣೆ ನಡೆಯಿತು. ಮಸೀದಿಗಳ ಸಮೀಪದ ಹಾದಿ ಬೀದಿಗಳಲ್ಲಿ ಹಸಿರುಮಯ ಬ್ಯಾನರ್‌ಗಳು, ಬಾವುಟಗಳು, ವಿದ್ಯುತ್ ದೀಪಾಲಂಕಾರಗಳು ರಾರಾಜಿಸುತ್ತಿದ್ದವು.
ಮಸೀದಿಗಳಲ್ಲಿ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ ನಗರದ ಇಸ್ಲಾಂಪುರ ಜಾಮಿಯಾ ದರ್ಗಾದಿಂದ ಪೈಗಂಬರ್ ಮೆಕ್ಕಾದ ಸ್ಥಬ್ದ ಚಿತ್ರಗಳು, ಮೌಲಿಗಳು ಕುರಾನ್ ಪಾರಾಯಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪ್ರಪಂಚದ ಸೃಷ್ಟಿಗೆ ಕಾರಣೀಭೂತರಾದ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮ ದಿನವಾಗಿ ಈದ್ ಮಿಲಾದ್ ಮಹತ್ವ ಪಡೆದಿದೆ. ಅವರ ಬದುಕು, ನಡೆ-ನುಡಿಗಳು, ಜನರಲ್ಲಿ ತೋರಿದ ಕಾರುಣ್ಯ,ಸಮಾನತೆ, ಸಹೋದರತೆ, ಸಹನೆ, ಏಕತೆ, ದೈವ ಭಕ್ತಿ, ಎಲ್ಲವೂ ಅದ್ಬುತ, ಸರ್ವ ಕಾಲದಲ್ಲೂ ಅನುಕರಣೀಯ.
ಈದ್ ಮಿಲಾದ್‌ನಂದು ಮಸೀದಿಗಳಲ್ಲಿ ವಿಶೇಷ ಪ್ರವಚನಗಳನ್ನು ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿಯನ್ನು ಮತ್ತು ಆಚರಿಸುವ ಬಗೆಯನ್ನೂ, ಧರ್ಮಪಾಲನೆಯ ಮಹತ್ವ ಮತ್ತು ಇದನ್ನು ಪಾಲಿಸುವ ಬಗೆಯನ್ನೂ ವಿವರಿಸಲಾಯಿತು.
ಮಹತ್ವ 🌙
ಈದ್ ಮೈಲಾದ್ ಎಂದರೆ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ. ಇಸ್ಲಾಮಿಕ್ ಚಂದ್ರಮಾನ ಪಂಚಾಂಗದ ಪ್ರಕಾರ ರಬೀ ಉಲ್ ಅವ್ವಲ್ ತಿಂಗಳ 12ನೇ ತಾರೀಖು ಈ ದಿನವನ್ನು ಆಚರಿಸಲಾಗುತ್ತದೆ.
1500ನೇ ಈದ್ ಮೈಲಾದ್ ವಿಶೇಷತೆ
ಇಸ್ಲಾಮಿಕ್ ಇತಿಹಾಸದಲ್ಲಿ 1500ನೇ ವರ್ಷವನ್ನು ಬಹಳ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಪೈಗಂಬರರ ಜನ್ಮದಿನವನ್ನು ನೆನೆದು, ಅವರ ಜೀವನದ ಉಪದೇಶಗಳು, ಧಾರ್ಮಿಕ ಮೌಲ್ಯಗಳು ಮತ್ತು ಮಾನವೀಯ ಸಂದೇಶಗಳನ್ನು ಪ್ರಪಂಚಕ್ಕೆ ಹಂಚಿಕೊಳ್ಳುವುದು ಇದರ ಉದ್ದೇಶ.
1500 ವರ್ಷಗಳ ಹಿಂದೆ ಪ್ರವಾದಿ ಮೊಹಮ್ಮದ್ (ಸ) ಅವರ ಮಾರ್ಗದರ್ಶನದಿಂದ ಇಸ್ಲಾಂ ಧರ್ಮವು ಪ್ರಾರಂಭವಾಗಿ ಜಗತ್ತಿನಾದ್ಯಂತ ಶಾಂತಿ, ಸಮಾನತೆ ಮತ್ತು ಸಹೋದರತ್ವವನ್ನು ಸಾರಿದೆ.
ಈ ವಿಶೇಷ ವರ್ಷದಲ್ಲಿ ಮುಸ್ಲಿಮರು ಕುರ್’ಆನ್ ಪಠಣ, ಮದೀನಾ ಶರೀಫ್ ಜಪ, ದರ್ಸ್, ಜುಲೂಸ್ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಮೂಲಕ ಪೈಗಂಬರರ ಜೀವನವನ್ನು ನೆನಪಿಸಿಕೊಳ್ಳುತ್ತಾರೆ.
1500ನೇ ಈದ್ ಮೈಲಾದ್ ಆಚರಣೆ ಮಾನವ ಸಮಾಜಕ್ಕೆ ಶಾಂತಿ, ಪ್ರೀತಿ, ಪರಸ್ಪರ ಗೌರವ ಮತ್ತು ಸಹಕಾರದ ಸಂದೇಶವನ್ನು ನೀಡುತ್ತದೆ ಎಂದು ಶಿಕ್ಷಕ ದಾದಾ ಪೀರ್ ತಿಳಿಸಿ.