ಮೈಸೂರು: ರಾಜ್ಯ ಸರಕಾರದಿಂದ ಸೆ.22ರಿಂದ 15 ದಿನಗಳ ಕಾಲ ನಡೆಯುವ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಜನಾಂಗ ಒಕ್ಕಲಿಗ ಎಂದೇ ನಮೂದಿಸುವಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ (Dr. Nirmalanandanath Swamiji) ತಿಳಿಸಿದರು.
ಮೈಸೂರಿನ ಹೆಬ್ಬಾಳದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಜಾತಿಗಣತಿ ಸಂಬಂಧ ಪೂರ್ವಭಾವಿಯಾಗಿ ಮೈಸೂರು ಜಿಲ್ಲೆಯ ಒಕ್ಕಲಿಗ ಜನಾಂಗದ ಮುಖಂಡರ ಸಭೆಯನ್ನು ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮುಂಬರುವ ಸಮೀಕ್ಷೆಯಲ್ಲಿ ಜಾತಿ ಕಲಂ ನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಉಪ ಜಾತಿ ಕಲಂನಲ್ಲಿ ಉಪಪಂಗಡ ಬಗ್ಗೆ ಮಾಹಿತಿ ಇದರೇ ನಮೂದಿಸಬೇಕು ಇಲ್ಲದಿದ್ದರೆ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ತಿಳಿಸಿದರು.
ತಮ್ಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಪ್ರತಿ ಗ್ರಾಮಕ್ಕೂ ಈ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಮುಖಂಡರುಗಳು ಸ್ವಯಂ ಪ್ರೇರಿತವಾಗಿ ಮಾಡಬೇಕು ಎಂದು ಸೂಚಿಸಿದರು.
ಎಲ್ಲರೂ ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕ್ರಮವಹಿಸಬೇಕೆಂದು ಹೇಳಿದರು.