ದೊಡ್ಡಬಳ್ಳಾಪುರ: ರಾಜ್ಯದ ಎಲ್ಲ ಸಮುದಾಯಗಳ ಸ್ಥಿತಿಗತಿಯನ್ನು ತಿಳಿಯುವ ಸಲುವಾಗಿ ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದ್ದು, ಸಮೀಕ್ಷೆಗೆ ಬರುವ ಗಣತಿದಾರರಿಗೆ ಜನತೆ ಸೂಕ್ತ ಮಾಹಿತಿ ಕೊಡುವ ಮೂಲಕ ಸಹಕರಿಸಬೇಕು ಎಂದು ಮಾಜಿ ಶಾಸಕ ಟಿ ವೆಂಕಟರಮಣಯ್ಯ (T. Venkataramanaiah) ಮನವಿ ಮಾಡಿದರು.
ನಗರದ ಒಕ್ಕಲಿಗರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಿಂದೆ 2013 -14ರಲ್ಲಿ ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳ ಸಮೀಕ್ಷೆ ನಡೆಸಿತ್ತು, ಆದರೆ ಹಲವು ಸಮುದಾಯದ ಮುಖಂಡರು, ಪ್ರಮುಖರು ಸಮೀಕ್ಷೆಯನ್ನು ಮತ್ತೊಮ್ಮೆ ಸೂಕ್ತ ರೀತಿಯಲ್ಲಿ ಮಾಡಬೇಕು ಎಂದು ಮನವಿ ಮಾಡಿದ ಹಿನ್ನಲೆ ರಾಜ್ಯ ಸರ್ಕಾರ ಮತ್ತೆ ಸಮೀಕ್ಷೆಗೆ ಮುಂದಾಗಿದೆ. ಸಮೀಕ್ಷೆಗೆ ಸಹಕಾರಿಯಾಗುವ ಅರ್ಜಿಗಳನ್ನು ಆಶಾ ಕಾರ್ಯಕರ್ತೆಯರು ಪ್ರತಿ ಮನೆ ತಲುಪಿಸಲಿದ್ದಾರೆ.
ಇದೇ ತಿಂಗಳ 22ರಿಂದ ಸಮೀಕ್ಷೆ ಆರಂಭವಾಗಲಿದ್ದು, ಮಾಹಿತಿ ಪಡೆಯಲು ಮನೆ ಬಾಗಿಲಿಗೆ ಶಿಕ್ಷಕರು ಬರಲಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಮುಖ್ಯಸ್ಥರು ಹಾಜರಿದ್ದು ಸೂಕ್ತ ಮಾಹಿತಿಯನ್ನು ಶಿಕ್ಷಕರಿಗೆ ಕೊಡುವ ಮೂಲಕ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸೆ.15ರಂದು ನಿರ್ಮಲಾನಂದ ಸ್ವಾಮೀಜಿ ಸಭೆ
ನಂತರ ಒಕ್ಕಲಿಗ ಮುಖಂಡರಾದ ನಾಗೇಶ್ ಮಾತನಾಡಿ, ರಾಜ್ಯ ಸರ್ಕಾರ ನೆಡೆಸಲಿರುವ ಸಮೀಕ್ಷೆಯಲ್ಲಿ ಸಮುದಾಯದ ಜನತೆ ಭಾಗವಹಿಸುವಿಕೆ ಹಾಗೂ ಮಾಹಿತಿ ನೀಡುವ ಕುರಿತು ಅರಿವು ಮೂಡಿಸುವ ಸಲುವಾಗಿ ಸೋಮವಾರ (ಸೆ. 15)ದಂದು ಆದಿಚುಂಚನಗಿರಿ ಮಹಾಸ್ವಾಮಿಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಒಕ್ಕಲಿಗರ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ತಾಲೂಕಿನ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಮೀಕ್ಷೆಯಲ್ಲಿ 60 ಪ್ರಶ್ನೆಗಳಿದ್ದು, ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಒಕ್ಕಲಿಗ ಸಮುದಾಯದ ಹೆಸರನ್ನು ಸರಿಯಾಗಿ ನಮೂದಿಸಬೇಕು. ಸಮುದಾಯ ಬಂಧುಗಳು ಸೂಕ್ತ ರೀತಿಯಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ತಾಲೂಕಿನಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿದ್ದ ಬೈರೇಗೌಡ, ಡಿ.ಸಿ.ಶಶಿಧರ್ ಮೊದಲಾದ ಮುಖಂಡರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಪಿ.ದಯಾನಂದ್, ವೆಂಕಟೇಶ್ ಬಾಬು, ಕೆ.ಪಿ.ಜಗನ್ನಾಥ್, ಬಿ.ಜಿ.ಹೇಮಂತರಾಜು, ವೆಂಕಟೇಶ್ (ಅಪ್ಪಿ), ವಿಶ್ವಾಸ್ ಹನುಮಂತೇಗೌಡ, ನಾಗೇಶ್, ರೇವತಿ ಅನಂತರಾಮು, ಶರತ್ ಪಟೇಲ್, ಮಲ್ಲೋಹಳ್ಳಿ ಪುನೀತ್ ಗೌಡ, ಮನು, ಜಿ.ಟಿ.ರವಿಕುಮಾರ್ ಶಾಂತಮ್ಮ, ವಿನಯ್, ದಿಲೀಪ್ ಅಶೋಕ್ ಮೊದಲಾದವರು ಹಾಜರಿದ್ದರು.