ಹೊಸಕೋಟೆ: ಸಾಲಬಾಧೆಯಿಂದ ಬೇಸತ್ತ ಕುಟುಂಬವೊಂದು ಆತ್ಮಹತ್ಯೆಗೆ (Suicide) ಯತ್ನಿಸಿದ್ದು, ಪರಿಣಾಮ ಮೂವರು ಸಾವನ್ನಪ್ಪಿದ್ದರೆ ಒಬ್ಬರು ಗಂಭೀರವಾಗಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಶಿವು (32 ವರ್ಷ), ಮಗಳು ಚಂದ್ರಕಲಾ (11ವರ್ಷ) ಮಗ ಉದಯ್ ಸೂರ್ಯ (07 ವರ್ಷ) ಎಂದು ಗುರುತಿಸಲಾಗಿದೆ.
ಶಿವುವಿನ ಚಿಕಿತ್ಸೆಗಾಗಿ ಕುಟುಂಬ ಮೈತುಂಬ ಸಾಲ ಮಾಡಿಕೊಂಡಿತ್ತು. ಪತಿ ಹುಷಾರಾದ ಬಳಿಕ ಕೆಲಸ ಮಾಡಲು ಸಾದ್ಯವಾಗುತ್ತಿರಲಿಲ್ಲ ಹೀಗಾಗಿ ಪತ್ನಿಯೇ ಇಡೀ ಸಂಸಾರದ ಜವಾಬ್ದಾರಿ ಹೊತ್ತಿದ್ದರು.ತಿಂಗಳು ಪೂರ್ತಿ ದುಡಿದರು ಬರುವ ಸಂಬಳ ಮನೆ ನಡೆಸಲು ಸಾದ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.
ಸಾಲಗಾರರು ಕೂಡ ಹಣ ವಾಪಸ್ ನೀಡುವಂತೆ ಕೇಳುತ್ತಿದ್ದರು. ಇವೆಲ್ಲದರಿಂದ ಬೇಸತ್ತ ದಂಪತಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾರೆ.
ಒಂದು ವೇಳೆ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡರೆ ಮಕ್ಕಳು ಅನಾಥರಾಗುತ್ತಾರೆ ಎಂದು ಅವರನ್ನು ಕೂಡ ಸಾಯಿಸಲು ನಿರ್ಧರಿಸಿದ್ದಾರೆ. ಅದರಂತೆ ಮೊದಲು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಮೃತ ಪಟ್ಟಿರುವುದು ಖಾತ್ರಿಯಾದ ಬಳಿಕ ಶಿವು ನೇಣು ಬಿಗಿದು ಸಾವನಪ್ಪಿದ್ದು, ಮಂಜುಳಾ ಕೂಡ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆದರೆ ಹಗ್ಗ ತುಂಡಾಗಿ ಕೆಳಕ್ಕೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.