ದೊಡ್ಡಬಳ್ಳಾಪುರ: ತಾಲೂಕಿನ ಮೂಲಕ ಪದೇ ಪದೇ ಅಕ್ರಮ ಗೋವುಗಳ ಸಾಗಾಟ (Illegal transportation of cows) ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ ಗ್ರಾಮಸ್ಥರೇ ಇಂತಹ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗೌರಿಬಿದನೂರು ತಾಲ್ಲೂಕಿನ ಅಲಿಪುರ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಮಾರ್ಗವಾಗಿ ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ತೆರಳುತ್ತಿದ್ದ ಕ್ಯಾಂಟರ್‌ನ್ನು ಹೊಸಹಳ್ಳಿ ಬಳಿ ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕೃಷಿಗೆ ಯೋಗ್ಯವಾದ 13 ಹಸು, 5 ಸೀಮೆ ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪ ಕೇಳಿಬಂದಿದೆ.
ಹೊಸಹಳ್ಳಿ ಬಳಿ ವಾಹನ ತಡೆದಾಗ ಓರ್ವ ಪರಾರಿಯಾಗಿದ್ದು, ಚಾಲಕ ಹಾಗೂ ಗೋವುಗಳು ತುಂಬಿದ್ದ ಕ್ಯಾಂಟರ್‌ನ್ನು ಹೊಸಹಳ್ಳಿ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ.
ಕಸಾಯಿ ಖಾನೆಗೆ ಗೋವುಗಳನ್ನು ಕೊಂಡೊಯ್ಯುತ್ತಿದ್ದಾಗೆ ಕ್ಯಾಂಟರ್ ಚಾಲಕ ತಿಳಿಸಿದ್ದಾನೆ ಎನ್ನಲಾಗಿದ್ದು, ಈ ಕುರಿತಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವೇಳೆ ಹೊಸಹಳ್ಳಿ ಗ್ರಾಮದ ಮನೋಜ್ ಕುಮಾರ್, ಸುಶಾಂತ್, ಶಶಿ, ವಿಜಯ್ ಕುಮಾರ್ ಮತ್ತಿತರರಿದ್ದರು.