ದೊಡ್ಡಬಳ್ಳಾಪುರ: ನಗರದ ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ.
ಮೃತನನ್ಜು ತಿಪ್ಪಗಾನಹಳ್ಳಿ ಮೂಲದ ಪವನ್ (27 ವರ್ಷ) ಎಂದು ಗುರುತಿಸಲಾಗಿದ್ದು, ನಗರದ ಜಾಲಪ್ಪ ಕಾಲೇಜಿನ ವಸತಿ ಗೃಹದಲ್ಲಿ ತಾಯಿಯೊಂದಿಗೆ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಯ್ಯಪ್ಪ ಸ್ವಾಮಿ ಯಾತ್ರೆ ಮುಗಿಸಿ ಬಂದಿದ್ದ ಮೃತ ಪವನ್, ಸೋಮವಾರ ರಾತ್ರಿ 11.30 ವೇಳೆ ಡಿ.ಕ್ರಾಸ್ ಕಡೆಯಿಂದ ಟಿಬಿ ವೃತ್ತದ ಮಾರ್ಗವಾಗಿ ತನ್ನ ಆಟೋದಲ್ಲಿ ತೆರಳವಾಗ, ಹಿಂದಿನಿಂದ ಕಾರಿನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತ ದುಷ್ಕರ್ಮಿಗಳು ಆಟೋ ತಡೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಪವನ್ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಪಾಂಡುರಂಗ ಎಸ್., ಇನ್ಸ್ಪೆಕ್ಟರ್ ಅಮರೇಶ್ ಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.