ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ‘ನಾವೇ ನಿಜವಾದ ನಿಷ್ಠಾವಂತ ಕಾರ್ಯಕರ್ತರು, ನಿಜವಾದ ವಿರೋಧ ಪಕ್ಷದ ನಾಯಕ ನಾನೇ, ನಾನು ಅಡ್ಜಸ್ಟ್‌ಮೆಂಟ್ ಗಿರಾಕಿ ಅಲ್ಲ ಎಂದು ಬೆಳಗಾವಿ ಸದನದಲ್ಲಿ ಬಿಜೆಪಿ (BJP) ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅಬ್ಬರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಿಂದೂಪರ ಕಾರ್ಯಕರ್ತರ ಮೆಚ್ಚುಗೆಗೆ ಕಾರಣವಾಗಿದೆ.
ಮಂಗಳವಾರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸದನದಲ್ಲಿ ಹಾಜರಿದ್ದರೂ ವಿಧಾನಸಭೆಯಲ್ಲಿ ಅಬ್ಬರಿಸಿದ ಯತ್ನಾಳ್, ನಾವೇ ನಿಜವಾದ ನಿಷ್ಠಾವಂತ ಕಾರ್ಯಕರ್ತರು, ಈ ಸದನದ ವಿರೋಧ ಪಕ್ಷದ ನಿಜವಾದ ನಾಯಕ ನಾನೇ, Adjustment ಗಿರಿಕಿಯಲ್ಲ.
ನಾನು ಮುಖ್ಯಮಂತ್ರಿ ಕಚೇರಿಗೆ ಹೋಗಿಲ್ಲ, ಯಾವುದೇ ಸಚಿವರಿಗೆ ಯಾವುದೇ ವಿನಂತಿಗಳನ್ನು ಮಾಡಿಲ್ಲ. ಆದ್ದರಿಂದ ನಾನು ನಿಜವಾದ ವಿರೋಧ ಪಕ್ಷದ ನಾಯಕ ಮತ್ತು ನೀವು ನನಗೆ ಉಪಸಭಾಪತಿಯ ಪಕ್ಕದ ಸ್ಥಾನವನ್ನು ನೀಡಬಹುದು ಎಂದು ಅಬ್ಬರಿಸಿದ್ದಾರೆ.
ಸದನದಲ್ಲಿ ಇಂದು pic.twitter.com/VVGL17gWrP
— Basanagouda R Patil (Yatnal) (@BasanagoudaBJP) December 9, 2025
ಸಂಕ್ಷಿಪ್ತ ಮಾಹಿತಿ
ಈಗ ವಿಷಯ ಏನಪ್ಪಾ ಅಂದರೆ, ಈ ವರ್ಷದ ಆರಂಭದಲ್ಲಿ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟ ನಂತರ ಯತ್ನಾಳ್, ಎಸ್. ಟಿ.ಸೋಮಶೇಖರ್ ಮತ್ತು ಎ.ಶಿವರಾಮ್ ಹೆಬ್ಬಾರ್ ಅವರನ್ನು ವಿಧಾನಸಭೆ ಅಧಿವೇಶನದಲ್ಲಿ ಹಿಂದಿನ ಬೆಂಚ್‌ಗಳಿಗೆ ವರ್ಗಾಯಿಸಲಾಗಿದೆ. ಹಿರಿಯ ಶಾಸಕರನ್ನು ಹಿಂದಿನ ಬೆಂಚುಗಳಲ್ಲಿ ಕೂರಿಸುವ ಮೂಲಕ ಅವಮಾನಿಸಲಾಗಿದೆ. ಹಿಂದಿನ ಅಧಿವೇಶನದಲ್ಲೂ ಹೀಗೆ ಮಾಡಲಾಗಿತ್ತು.
ನಾವು ಐದರಿಂದ ಆರು ಬಾರಿ ಆಯ್ಕೆಯಾಗಿದ್ದೇವೆ, ನಮ್ಮನ್ನು ಮುಂದಿನ ಸಾಲಿನಲ್ಲಿ ಕೂರಿಸಲು ವ್ಯವಸ್ಥೆ ಮಾಡಬೇಕು ಎಂದು ಯತ್ನಾಳ್ ಹೇಳಿದರು. ಅಲ್ಲದೆ ಆಸನ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಸ್ಪೀಕರ್ ಗೆ ಮನವಿ ಮಾಡಿದರು.
ನೀವೇ ನಿಷ್ಠಾವಂತ ಕಾರ್ಯಕರ್ತರು
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ ಖಾದರ್, ನೀವೇ ನಿಷ್ಠಾವಂತ ಕಾರ್ಯಕರ್ತರು ಅದ ನಾನು ಒಪ್ಪುತ್ತೇನೆ, ರಾಜಕೀಯದಲ್ಲಿ ಹಿರಿಯರು ಅಥವಾ ಕಿರಿಯರು ಇಲ್ಲ ಎಂದು ಯತ್ನಾಳ್ ಗೆ ಹೇಳಿದರು. ಹಿರಿತನದ ಆಧಾರದ ಮೇಲೆ ಸ್ಥಾನಗಳನ್ನು ಹಂಚಲಾಗುವುದಿಲ್ಲ, ಬಹುಮತ ಹೊಂದಿರುವವರಿಗೆ ಸದನದಲ್ಲಿ ಬೆಂಚುಗಳು ಸಿಗುತ್ತವೆ ಮತ್ತು ಕಡಿಮೆ ಸಂಖ್ಯೆಯ ಬಲವಿರುವವರಿಗೆ ವಿರೋಧ ಪಕ್ಷದ ಬೆಂಚುಗಳು ಸಿಗುತ್ತವೆ ಎಂದು ಅವರು ಹೇಳಿದರು.
ಯತ್ನಾಳ್ ಅವರಿಗೆ ಬಿಜೆಪಿಯಲ್ಲಿದ್ದಾಗ ಮುಂಭಾಗದ ಆಸನವನ್ನು ನೀಡಲಾಗಿತ್ತು ಎಂದು ಹೇಳಿದ ಸ್ಪೀಕರ್, ಈಗ ಅವರು ಪಕ್ಷದಿಂದ ಹೊರಗಿದ್ದೀರಾ ಏನು ಮಾಡಬಹುದು ಎಂದು ಪ್ರಶ್ನಿಸಿದರು.
“ನೀವು (ಯತ್ನಾಳ್) ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಭಾಗವಾಗಿದ್ದರೆ, ನಿಮಗೆ ಆಯಾ ಕಡೆಗಳಲ್ಲಿ ಮುಂಚೂಣಿಯ ಸ್ಥಾನ ಸಿಗುತ್ತದೆ” ಎಂದು ಸ್ಪೀಕರ್ ವಿವರಿಸಿದರು.
ಒಟ್ಟಾರೆ ಸದನದಲ್ಲಿ ವಿರೋಧ ಪಕ್ಷದ ನಾಯಕ ನಾನೇ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿಕೃತ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರುಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡವರು, ಸರ್ಕಾರದ ವಿರುದ್ಧ ದನಿ ಎತ್ತುತ್ತಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಹಿಂದೂಪರ ಕಾರ್ಯಕರ್ತರು ಯತ್ನಾಳ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.