
ದೊಡ್ಡಬಳ್ಳಾಪುರ: ಭಾನುವಾರ ಸಂಜೆ ನಿಧನರಾದ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಗರದ ಬಸವ ಭವನದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಮುಖಂಡರು, ಹಿರಿಯ ರಾಜಕೀಯ ಮುತ್ಸದ್ದಿ, ಅಜಾತ ಶತ್ರು, ವೀರ ಶೈವ ಸಮಾಜದ ಧೀಮಂತ ನಾಯಕರು ಹಾಗೂ ಕೊಡುಗೈ ದಾನಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನ ಸಮುದಾಯಕ್ಕಷ್ಟೇ ಅಲ್ಲದೇ ಸಮಾಜಕ್ಕೂ ಸಹ ತುಂಬಲಾರದ ನಷ್ಟವಾಗಿದೆ.
ನಮ್ಮ ಸಮಾಜಕ್ಕೆ ಅನ್ಯಾಯವಾದಾಗಲೆಲ್ಲ ಗಟ್ಟಿಧ್ವನಿಯಲ್ಲಿ ಮಾತನಾಡಿ ಪ್ರತಿಭಟಿಸಿ, ನ್ಯಾಯ ಒದಗಿಸುತ್ತಿದ್ದ ನೇರ-ನಿಷ್ಠುರ ನಡೆಯ ನಾಯಕರಾಗಿದ್ದರು, ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಎಲ್ಲರಿಗೂ ಮಾರ್ಗದರ್ಶಿಗಳಾಗಿದ್ದರು ಎಂದು ಸ್ಮರಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಲೋಕೇಶ್ ನಾಗಸಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷ ಗಗನ್, ಶಿಕ್ಷಕ ವಿ.ಸಿ.ಜ್ಯೋತಿ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಲತಾರಾಧ್ಯ, ಪ್ರಭಾಕರ್ ಸುನಿಲ್ ಕುಮಾರ್, ಈರಣ್ಣ, ಮುತ್ತಣ್ಣ ಸೇರಿದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು, ಬಸವ ಭವನದ ಪದಾಧಿಕಾರಿಗಳು ಭಾಗವಹಿಸಿದ್ದರು.