
ಶಬರಿಮಲೆ (ಕೇರಳ): ಕೇರಳದ ಪತ್ತನಂತಿಟ್ಟ ಕ್ಷೇತ್ರದಲ್ಲಿ ಸದ್ಯ ನಡೆಯುತ್ತಿರುವ ವಾರ್ಷಿಕ ಮಂಡಲ ತೀರ್ಥಯಾತ್ರೆಯ ಈ ಋತುವಿನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ (Sabarimala Ayyappa Swamy) ಸನ್ನಿದಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 25 ಲಕ್ಷ ದಾಟಿದೆ.
ಇದು 2024ರ ಋತುವಿನಲ್ಲಿ ಭೇಟಿ ನೀಡಿದ ಭಕ್ತರ ಸಂಖ್ಯೆ 21 ಲಕ್ಷಕ್ಕಿಂತ ಅಧಿಕವಾಗಿದೆ.
ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ನಡೆಯುತ್ತಿರುವ ತೀರ್ಥಯಾತ್ರೆಯ ಅವಧಿಯಲ್ಲಿ ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಆರಂಭಿಕ ದಿನಗಳಲ್ಲಿ ಉಂಟಾದ ತೊಂದರೆ ಬಿಟ್ಟರೆ ಭಕ್ತರಿಗೆ ಸುಗಮ ದರ್ಶನಕ್ಕಾಗಿ ಹಲವು ವ್ಯವಸ್ಥೆಗಳಲ್ಲಿ ಸುಧಾರಣೆ ತಂದಿದ್ದರಿಂದ ಯಾವುದೇ ಗೊಂದಲ, ಒತ್ತಡ ಇಲ್ಲವಾಗಿದೆ.
ಪ್ರಸ್ತುತ, ಸರಾಸರಿ 80,000 ಯಾತ್ರಿಕರು ಶಬರಿಮಲೆಗೆ ಪ್ರತಿದಿನ ಭೇಟಿ ನೀಡುತ್ತಿದ್ದಾರೆ ಎಂದು ಟಿಡಿಬಿ ತಿಳಿಸಿದೆ. ಈ ಋತುವಿನಲ್ಲಿ ಅತಿ ಹೆಚ್ಚು ಭಕ್ತರು ಡಿಸೆಂಬರ್ 8 ರಂದು ದೇವಾಲಯಕ್ಕೆ ಭೇಟಿ ನೀಡಿದ್ದರು, ಆಗ 101,844 ಭಕ್ತರು ಭೇಟಿ ನೀಡಿದ್ದರು. ಇದಕ್ಕೂ ಮೊದಲು, ನವೆಂಬರ್ 24 ರಂದು, ಯಾತ್ರಿಕರ ಸಂಖ್ಯೆಯೂ ಒಂದು ಲಕ್ಷ ದಾಟಿ 100,867 ತಲುಪಿತ್ತು ಎಂದು ಹೇಳಿಕೆ ತಿಳಿಸಿದೆ.
ಡಿಸೆಂಬರ್ ಮಾಸಾಂತ್ಯ ವೇಳೆಗೆ ದೇಗುಲಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 30 ಲಕ್ಷದ ಸಮೀಪವಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.