ರಾಯಚೂರು: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಸಿದ್ದರಾಮಾನಂದಪುರಿ ಮಹಾಸ್ವಾಮಿ (Siddaramananda puri sri) ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ.
ಕೇವಲ ಮೂರು ದಿನಗಳ ಹಿಂದಷ್ಟೇ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಶ್ರೀಗಳು ಇಂದು ಇಲ್ಲ ಎಂಬ ಸುದ್ದಿ ಭಕ್ತರಲ್ಲಿ ತೀವ್ರ ಆಘಾತ ಉಂಟುಮಾಡಿದೆ.
ಇಂದು ಬೆಳಗಿನ ಜಾವ ಸಿದ್ಧರಾಮಾನಂದ ಪುರಿ ಸ್ವಾಮೀಜಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಾಲುಮತ ಸಮಾಜದ ಹಲವು ಸಚಿವರು ಹಾಗೂ ಗಣ್ಯರೊಂದಿಗೆ ಶ್ರೀಗಳು ಆಪ್ತ ಸಂಬಂಧ ಹೊಂದಿದ್ದರು.
ರಾಜ್ಯಾದ್ಯಂತ ಅಪಾರ ಭಕ್ತವೃಂದವನ್ನು ಹೊಂದಿದ್ದ ಸ್ವಾಮೀಜಿಗಳ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಸಿದ್ಧರಾಮಾನಂದ ಪುರಿ ಸ್ವಾಮೀಜಿ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದ ಮೂಲದವರಾಗಿದ್ದು, ಕಾಗಿನೆಲೆ ಕನಕ ಗುರುಪೀಠದ ಮಹಾಸಂಸ್ಥಾನದ ಕಲಬುರಗಿ ವಿಭಾಗದ ಶಾಖಾಮಠದ ಸ್ವಾಮೀಜಿಯಾಗಿದ್ದರು.
ನಾಲ್ಕು ಪೀಠಗಳಲ್ಲಿ ಅತಿ ಕಿರಿಯ ಸ್ವಾಮೀಜಿಯಾಗಿ ಗುರುತಿಸಿಕೊಂಡಿದ್ದರು.
18ನೇ ವಯಸ್ಸಿನಲ್ಲೇ ಗೃಹತ್ಯಾಗ ಮಾಡಿ ಮುರುಘಾಮಠಕ್ಕೆ ತೆರಳಿ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡ ಶ್ರೀಗಳು, 1992ರಲ್ಲಿ ರಾಜ್ಯದಲ್ಲಿ ಕಾಗಿನೆಲೆ ಪೀಠಗಳ ಸ್ಥಾಪನೆಯ ಸಂದರ್ಭದಲ್ಲಿ ಶಿವಾನಂದ ಪುರಿ, ಈಶ್ವರಾನಂದ ಪುರಿ ಹಾಗೂ ನಿರಂಜನಾನಂದ ಪುರಿ ಸ್ವಾಮೀಜಿಗಳೊಂದಿಗೆ ವೇದಾಧ್ಯಯನ ನಡೆಸಿದರು.
ಕಠಿಣ ವೇದಾಭ್ಯಾಸ ಪೂರ್ಣಗೊಳಿಸಿ ನಂತರ ಕಲಬುರಗಿ ವಿಭಾಗದ ಕನಕಗುರು ಪೀಠದ ಪೀಠಾಧಿಪತಿಯಾಗಿ ಆಯ್ಕೆಯಾದರು.
2009ರಲ್ಲಿ ಸಿಂಧನೂರಿನಲ್ಲಿ ಕುಟೀರದಲ್ಲಿ ಪೀಠ ಸ್ಥಾಪನೆ ಮಾಡಲಾಗಿದ್ದು, 2011ರಲ್ಲಿ ತಿಂಥಣಿಯಲ್ಲಿ ಶ್ರೀಮಠವನ್ನು ಆರಂಭಿಸಿದರು. 2012-13ರಲ್ಲಿ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸುವ ಮೂಲಕ ಖ್ಯಾತಿ ಗಳಿಸಿದರು.
ಈ ಕಾರ್ಯಕ್ರಮದ ಮೂಲಕ ಇಡೀ ಭಾರತದಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಒಂದೆಡೆ ಸೇರಿಸಿ ಸಾಂಸ್ಕೃತಿಕ ಸಮ್ಮಿಲನಕ್ಕೆ ಕಾರಣರಾದ ಏಕೈಕ ಶ್ರೀಗಳಾಗಿ ಗುರುತಿಸಿಕೊಂಡಿದ್ದರು.
ಹಾಲುಮತ ಸಮಾಜದ ಶ್ರೇಷ್ಠ ಧಾರ್ಮಿಕ ನಾಯಕನಾದ ಸಿದ್ಧರಾಮಾನಂದ ಪುರಿ ಸ್ವಾಮೀಜಿಯ ಅಗಲಿಕೆಯಿಂದ ಸಮಾಜದಲ್ಲಿ ಶೋಕದ ಛಾಯೆ ಆವರಿಸಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ನೋವುಂಟುಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ.
ಶ್ರೀಗಳ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ, ಶ್ರೀ ಮಠದ ಭಕ್ತಾದಿಗಳು ಹಾಗೂ ಅಪಾರ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.