ದೊಡ್ಡಬಳ್ಳಾಪುರ: ಭಾರತ ಪ್ರಧಾನವಾದ ದೇಶವೆನ್ನುವ ಪರಿಕಲ್ಪಿನೆಗೆ ಪುರುಷರಿಗಿಂತ ಮಹಿಳೆಯರ ಪರಿಶ್ರಮ ಹೆಚ್ಚು ಕಾರಣವಾಗಿದೆ ಎಂದು ಘಾಟಿ ಸುಬ್ರಹ್ಮಣ್ಯ ದೇವಾಲಯದ ಪ್ರಧಾನ ಅರ್ಚಕ ಟಿ.ಎನ್ ಗುರುರಾಜ ಶರ್ಮ ಅಭಿಪ್ರಾಯಪಟ್ಟರು.
ತಾಲೂಕಿನ ಘಾಟಿ ಸುಬ್ರಮಣ್ಯ ದಾಸೋಹ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುನಿಂದ ಆಯೋಜಿಸಲಾಗಿದ್ದ ರಾಷ್ಟೀಯ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಕೃಷಿ ಅನ್ವೇಷಣೆ ಮಾಡಿದವಳು ಮಹಿಳೆ ಎಂದು ನಮ್ಮ ಸಮಾಜ ಶಾಸ್ತ್ರಜ್ಞನರು ದೃಡವಾದ ನಿಲುವಿಗೆ ಒಪ್ಪಿಕೊಂಡಿದ್ದರೂ ಅವಳ ಪರಿಶ್ರಮವನ್ನು ಪುರುಷ ಪ್ರಧಾನ ಸಮಾಜ ಸಹಜವಾಗಿ ಗುರುತಿಸುವುದಿಲ್ಲ ಎಂದರು.
ಪ್ರಗತಿಪರ ರೈತ ವಾಸುದೇವ್ ಮಾತನಾಡಿ ನಮ್ಮ ಕೃಷಿ ಬದುಕಿನಲ್ಲಿ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಹಾಗೂ ಶ್ರದ್ದೆಯಿಂದ ನಿರ್ವಹಿಸುವುದು ಮಹಿಳೆ ಎನ್ನಬಹುದು. ರೈತನೆಂದರೆ ಕೇವಲ ಪುರುಷನೆಂಬ ಮನಸ್ಥಿತಿ ಸಾಮಾನ್ಯವಾಗಿದ್ದು. ದಿನ ಕಳೆದಂತೆ ಜಗತ್ತು ಬದಲಾವಣೆ ಕಂಡರೂ ಮಹಿಳೆ ಮಾತ್ರ ಒಡೆತಿಯಾಗದೆ ಕೂಲಿ ಆಳಿನಂತೆ ದುಡಿಯುತ್ತಿದ್ದಾಳೆ. ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕೃಷಿ ಹಾಗೂ ಗ್ರಾಮೀಣ ಕಸುಬುಗಳಲ್ಲಿ ಮಹಿಳೆಯಿಲ್ಲದೆ ಯಾವುದೇ ಕೆಲಸ ನಡೆಯುವುದು ಕಷ್ಟಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ಉನ್ನತೀಕರಿಸಿದಂತೆ ಕೃಷಿ ಕಡೆ ಒಲುವ ಕಡಿಮೆಯಾಗಿದೆ. ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ನೆಲಕಚ್ಚಿದ್ದಾರೆ. ಯಾರು ಸಹ ಕೃಷಿ ಮಾಡಲು ಮುಂದಾಗುತ್ತಿಲ್ಲ ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಮಹಾದೇವ್ ಮಾತನಾಡಿ, ಬಹಳ ಹಿಂದಿನಿಂದಲೂ ಮಹಿಳೆಗೆ ಸೂಕ್ತ ಸ್ಥಾನ ಮಾನ ಕಲ್ಪಿಸುವಲ್ಲಿ ಎಡವಿದ್ದರ ಪರಿಣಾಮ ವಾಸ್ತವಿಕ ನೆಲಗಟ್ಟಿನಲ್ಲಿ ಪ್ರಾಮುಖ್ಯತೆ ಸಿಗುತ್ತಿಲ್ಲ. ಭಾರತ ದೇಶದ ಆರ್ಥಿಕತೆಗೆ ಕೃಷಿ ಬೆನ್ನಲುಬಾದರೆ ಗ್ರಾಮೀಣ ಭಾಗದ ಶೇ75 ರಷ್ಟು ಮಹಿಳೆಯರು ಕೃಷಿಗೆ ಬೆನ್ನಲುಬಾಗಿದ್ದಾರೆ ಎಂದರು.
ಕಾರ್ಯನಿರ್ವಾಹಣಾಧಿಕಾರಿ ಎನ್ ಕೃಷ್ಣಪ್ಪ, ತುರುವನಹಳ್ಳಿ ನರಸಮ್ಮವಾಸುದೇವ್, ಎಸ್.ಎಸ್ ಘಾಟಿ ಶಾಂತಿಭಾಯಿಗೋವಿಂದನಾಯಕ್, ಹೊಸಹಳ್ಳಿ ಗ್ರಾಪಂ ಮಾಜಿ ಸದಸ್ಯೆ ರೋಹಿಣಿ ಗೋವಿಂದರಾಜ್, ಹಸನಘಟ್ಟ ಉಮಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎನ್.ನಾಗರತ್ನ, ಯುವ ರೈತ ಮುಖಂಡ ಪುರುಷೋತ್ತಮ್, ಲೀಲಾವತಿ, ಬಿ.ಪಿ.ಹರಿಕುಮಾರ್, ನಂ ಮಹದೇವ್ ಇದ್ದರು.