ದೊಡ್ಡಬಳ್ಳಾಪುರ: ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಅನ್ಯ ಧರ್ಮ, ಸಂಘಟನೆ ಕುರಿತಂತೆ ಅವಹೇಳನಾಕಾರಿಯಾಗಿ ಮಾತನಾಡಿದ್ದ ಇಮ್ರಾನ್ ಎಂಬಾತನ ವಿರುದ್ದ ನಗರ ಠಾಣೆ ಪೊಲೀಸರು ದೂರು ದಾಖಲಿಸಿ ಬಂಧಿಸಿದ್ದಾರೆ. ಬಂಧಿತ ಯುವಕ ಬಳಸುತ್ತಿದ್ದ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಭಜರಂಗದಳದ ಕಾರ್ಯಕರ್ತರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಕುರಿತಂತೆ ಗುರುವಾರ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಭಜರಂಗ ದಳದ ತಾಲ್ಲೂಕು ಸಂಚಾಲಕ ಭಾಸ್ಕರ್, ಮುಖಂಡರಾದ ಅಶೋಕ್, ಸತೀಶ್, ಮಾತೃಭೂಮಿಯ ಬಗ್ಗೆ ಯಾರೊಬ್ಬರು ಅಗೌರವಯುತವಾಗಿ ಮಾತನಾಡಿದು ಕಾನೂನು ವಿರೋಧಿ ಕ್ರಮವಾಗಿದೆ. ಎಲ್ಲರೂ ಒಟ್ಟಾಗಿ ನೆಮ್ಮದಿಯಿಂದ ಬಾಳಬೇಕು ಎನ್ನುವುದೇ ನಮ್ಮ ಸಂವಿಧಾನದ ಆಶಯ. ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇವೆ. ಇಂತಹ ಘಟನೆಗಳು ನಗರದಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.
ಮುಸ್ಲಿಂ ಮುಖಂಡರಾದ ಫಾಯಾಜ್ಪಾಷ, ಬಷೀರ್, ನಗರದಲ್ಲಿ ಎಂದೂ ಸಹ ಧಾರ್ಮಿಕ ವಿಚಾರವಾಗಿ ಗಲಾಟೆ ನಡೆದಿಲ್ಲ. ಫೇಸ್ಬುಕ್ನಲ್ಲಿ ನಮ್ಮ ದೇಶದ ಕುರಿತಂತೆ ಹಗುರವಾಗಿ ಮಾತನಾಡಿರುವ ವ್ಯಕ್ತಿಗೆ ಸೂಕ್ತ ತಿಳುವಳಿಕೆ ಹೇಳಲಾಗಿದೆ. ಕ್ಷಮೆಯನ್ನು ಸಹ ಕೇಳಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರು ಎಚ್ಚರವಹಿಸಬೇಕಿದೆ. ಎಲ್ಲಾ ಧರ್ಮದವರು ಸಮಾನರು.ಯಾರು ಸಹ ಮೇಲು, ಕೀಳು ಎನ್ನುವಂತಿಲ್ಲ ಎಂದರು.
ಸಭೆಯಲ್ಲಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಮಾಜದಲ್ಲಿ ಅಶಾಂತಿಯುಂಟು ಮಾಡುವಂತೆ ಯಾರೊಬ್ಬರು ಮಾತನಾಡುವಂತಿಲ್ಲ. ನಮ್ಮ ದೇಶದ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿರುವ ಯುವಕನ ವಿರುದ್ದ ಕಠಿಣ ಕ್ರಮ ಕೈಗೊಂಡು ದೂರು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಶಾಲ ದೃಷ್ಠಿಕೋನದಿಂದ ಯೋಚಿಸುವ ಮೂಲಕ ದೇಶದ ಅಭಿವೃದ್ದಿಗಾಗಿ ಎಲ್ಲರು ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ಸಬ್ಇನ್ಸ್ಪೆಕ್ಟರ್ ವಿ.ಗಜೇಂದ್ರ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……