
ಬೆಂ.ಗ್ರಾ.ಜಿಲ್ಲೆ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಸಾಹಿತಿ, ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಚಂದ್ರಶೇಖರ ಪಾಟೀಲ್ (ಚಂಪಾ) ಅವರ ಅಗಲಿಕೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹಾಗೂ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು ಸಂತಾಪ ಸೂಚಿಸಿದ್ದಾರೆ.
ಶ್ರೀಯುತರ ಅಗಲಿಕೆಯಿಂದ ನಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಅವರ ಸಾಹಿತ್ಯ ಕೃಷಿ, ಸೇವೆ ನಮ್ಮೆಲ್ಲರಿಗೂ ದಾರಿದೀಪವಾಗಿತ್ತು ಶ್ರೀಯುತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಖಃ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ನಮ್ಮ ಜಿಲ್ಲಾ ಕಸಾಪ ಬಳಗದಿಂದ ಪ್ರಾರ್ಥಿಸುತ್ತೇನೆ ಎಂದು ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಹೆಸರಾಂತ ಸಮಾಜವಾದಿ ಲೇಖಕ, ಚಿಂತಕ, ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕ ಪ್ರೊ.ಚಂದ್ರಶೇಖರ ಪಾಟೀಲ್ ಅವರ ನಮ್ಮನ್ನು ಅಗಲಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು ಸಂತಾಪ ಸೂಚಿಸಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆಯ ಪ್ರಮುಖ ರೂವಾರಿಗಳಲ್ಲೊಬ್ಬರಾಗಿ, ದಲಿತ ಸಂಘರ್ಷ ಸಮಿತಿ ಹಾಗೂ ರೈತ ಚಳವಳಿಯ ಹಿತೈಷಿ ಸ್ನೇಹಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಪರ್ಯಾಯ ರಾಜಕಾರಣದ ಚಿಂತಕರಾಗಿ, ಕವಿ- ನಾಟಕಕಾರ – ವಿಮರ್ಶಕ- ಅಂಕಣಕಾರರಾಗಿ ಡಾ.ಚಂದ್ರಶೇಖರ ಪಾಟೀಲರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯವಾಗಿದೆ.
ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತಮ್ಮ ಗುರುಗಳಾದ ಡಾ.ವಿ.ಕೃ.ಗೋಕಾಕ್ ಅವರಿಗೆ ಗೋಕಾಕ್ ಗೋ ಬ್ಯಾಕ್ ಎಂದು ಪ್ರತಿಭಟಿಸಿದ್ದರು.
‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಕರೆ ಕೊಟ್ಟಿದ್ದ ಚಂದ್ರಶೇಖರ ಪಾಟೀಲ್ ಅವರು ಗೋಕಾಕ್ ಚಳುವಳಿಗೆ ವರನಟ ಡಾ.ರಾಜ್ ಕುಮಾರ್ ಭಾಗವಹಿಸುವಂತೆ ಮಾಡುವಲ್ಲಿ ಪ್ರಮುಖ ಪತ್ರ ವಹಿಸಿದ್ದರು.
ಕನ್ನಡ ಸಾಹಿತ್ಯ ‘ಪಂಪ ನಿಂದ ಚಂಪಾ ತನಕ ‘ ಎಂದು ಪಿ.ಲಂಕೇಶ್ ಅವರು ಕೊಟ್ಟ ವಿಡಂಬನಾತ್ಮಕ ಬಿರುದಿಗೆ ಉತ್ತರ ಕೊಟ್ಟಿದ್ದರು ಎಂದು ಗೋವಿಂದರಾಜು ಸ್ಮರಿಸಿದ್ದಾರೆ.
ಇಂದು ಸಂಜೆ ನುಡಿನಮನ: ಖ್ಯಾತ ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ ಅವರ ನಿಧನ ಪ್ರಯುಕ್ತ ನುಡಿ ನಮನ ಕಾರ್ಯಕ್ರಮ ಇಂದು ಸಂಜೆ 4 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲಾ ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಜನಪರಸಂಘಟನೆಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು ವಿನಂತಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….