ಬೆಂಗಳೂರು, (ಜುಲೈ.10): ಪವಿತ್ರ ಗೌಡರಿಗೆ ಅಶ್ಲೀಲ ಸಂದೇಶ ಕಳಿಸಿದರೆಂಬ ಕಾರಣ ವ್ಯಕ್ತಿಯೋರ್ವನ ಕೊಲೆ ಆರೋಪದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನಟ ದರ್ಶನ್ ಬಂಧನವಾದ ದಿನದಿಂದ ಪ್ರತಿನಿತ್ಯ ಆ ಪ್ರಕರಣ ಬಿಟ್ಟರೆ ಬೇರೆ ಸಮಸ್ಯೆಗಳೇ ಇಲ್ಲ ಎಂಬಂತೆ ಖಾಸಗಿ ಸುದ್ದಿ ವಾಹಿನಿಗಳು ವರ್ತಿಸುತ್ತಿವೆ ಎಂಬ ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೆ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರು, ಸುದ್ದಿವಾಹಿನಿಗಳು ಮಾತಿನಲ್ಲೇ ಮಂಗಳಾರತಿ ಮಾಡಿದ್ದಾರೆ.
ಫಾದರ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಬಂಧನದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ಈಗ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಕಳೆದ ಒಂದು ತಿಂಗಳಿಂದ ಎಲ್ಲರೂ ಮಾತನಾಡುತ್ತಿದ್ದಾರೆ. ಹೀಗಾಗಿ ನಾವು ಸ್ವಲ್ಪ ಬದಲಾವಣೆ ಮಾಡೋಣ ಎಂದಿದ್ದಾರೆ.
ನಿಮಗೆ ಈಗ ದರ್ಶನ್ ಬಗ್ಗೆ ಮಾತನಾಡಬೇಕು, ಸೂರಜ್ ರೇವಣ್ಣ ಬಗ್ಗೆ ಮಾತನಾಡಬೇಕು, ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡಬೇಕು, ಯಡಿಯೂರಪ್ಪ ಅವರ ಬಗ್ಗೆ ಮಾತನಾಡಬೇಕು ಅಲ್ವಾ..?
ಕಳೆದ ಒಂದೂವರೆ ತಿಂಗಳಿಂದ ಎಲ್ಲರೂ ಇದನ್ನೇ ಮಾತನಾಡುತ್ತಿರುವುದಿಂದ ನಾನು ನೀವು ಕುಳಿತುಕೊಂಡು ನೀಟ್ ಪರೀಕ್ಷೆ ಬಗ್ಗೆ ಮಾತನಾಡೋಣ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿಯಾಗುತ್ತಿಲ್ಲ ಅದರ ಬಗ್ಗೆ ಮಾತನಾಡೋಣ. ಆಮೇಲೆ ಆಟೋ ಚಾಲಕರಿಗೆ ಬೈಕ್‌ನವರಿಂದ ತೊಂದರೆಯಾಗುತ್ತಿದೆ. ಅದರ ಬಗ್ಗೆ ಮಾತನಾಡೋಣ.
ಈ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ ಅವರ ಬಗ್ಗೆ ಏನಾದರೂ ಮಾತನಾಡೋಣ. ಉಳಿದವರೆಲ್ಲಾ ಬೇರೆ ವಿಚಾರಗಳಿಂದ ಬ್ಯೂಸಿಯಾಗಿರುವುದರಿಂದ ನಾವು ಈ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಹೇಳಿದ್ದಾರೆ.
ಆ ಮೂಲಕ ಮಾಧ್ಯಮಗಳು ಮಾಡಬೇಕಾದ, ತೋರಬೇಕಾದ, ಚರ್ಚಿಸಬೇಕಾದ ವಿಚಾರ ಯಾವುದು ಎಂಬುದನ್ನು ಮಾತಿನಲ್ಲಿ ಸೂಚ್ಯವಾಗಿ ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….