ಒಂದು ಕಾಡು, ಆ ಕಾಡಿನ ಮರಗಳ ತುಂಬ ಹಕ್ಕಿಗಳು, ಸಂಜೆಯ ಸಮಯ. ಎರಡು ‘ಪುಟ್ಟ ಹಕ್ಕಿಗಳು ದೂರದ ಕಣಿವೆಯಲ್ಲಿ ಇದ್ದ ತಮ್ಮ ಪುಟ್ಟ ಗೂಡಿಗೆ ಹಾರಿಹೋಗುತ್ತಾ ಇದ್ದವು.
ಆ ಕಣಿವೆಯಲ್ಲಿ ಬೆಟ್ಟಕ್ಕೆ ಬೈತಲೆ ತೆಗೆದ ಹಾಗೆ ಒಂದು ಅಂಕುಡೊಂಕು ರಸ್ತೆ. ಆ ರಸ್ತೆಯಲ್ಲಿ ನಟ್ಟ ನಡುವೆ ನಿಂತಿರುವ ಒಂದು ಮೋಟಾರು ಕಾರು. ಯಾರದಪ್ಪಾ ಈ ಕಾರು…? ಚಲನೆ ಇಲ್ಲ. ಶಬ್ದವಿಲ್ಲ. ಇದನ್ನು ಯಾರು ಇಲ್ಲಿ ಬಿಟ್ಟು ಹೋದರು? ಆ ಪುಟ್ಟ ಹಕ್ಕಿಗಳು ಕುತೂಹಲ ತಡೆಯಲಾರದೆ ಕಾರಿನ ಗಾಜಿನ ಕಿಟಕಿಯಿಂದ ಒಳಗೆ ಇಣುಕಿ ನೋಡಿದವು.
ಒಳಗೆ ಒಬ್ಬ ಪುಟ್ಟ ಹುಡುಗ ಹಚ್ಚ ಹಸಿರು ಮೆತ್ತೆ ಮೇಲೆ ನಿದ್ದೆ ಮಾಡುತ್ತಾ ಇದ್ದಾನೆ. ಅವನ ಕೈಯಲ್ಲಿ ಒಂದು ಪುಟ್ಟ ಗಿಳಿಯ ಬೊಂಬೆ. ಆ ಗಿಳಿಗೆ ಕೆಂಪೋ ಕೆಂಪು ಕೊಕ್ಕು. ಹಚ್ಚ ಹಸಿರು ಮೈಬಣ್ಣ. ಕಾಡಿನ ಹಕ್ಕಿಗೆ ಗಿಳಿ ಬೊಂಬೆ ನೋಡಿ ತುಂಬಾ ಖುಷಿಯಾಯ್ತು.
ಈ ಹುಡುಗನಿಗೆ ಹಕ್ಕಿ ಎಂದರೆ ತುಂಬಾ ಇಷ್ಟ ಇರಬೇಕು. ಅದಕ್ಕೇ ಅವನು ಹಕ್ಕಿ ಗೊಂಬೆ ಇಟ್ಟುಕೊಂಡು ಮಲಗಿದ್ದಾನೆ! ಪಾಪ! ಎಷ್ಟು ಮುದ್ದು ಹುಡುಗ! ಇನ್ನೇನು ಕಾಡಲ್ಲಿ ಕತ್ತಲು ಆಗ್ತಾ ಇದೆ. ಕತ್ತಲಾದ ಮೇಲೆ ಹುಲಿರಾಯ ಇಲ್ಲಿಗೆ ಬರುತ್ತಾನೆ. ಹುಡುಗ ಒಬ್ಬನೇ ಇರುವುದನ್ನು ನೋಡುತ್ತಾನೆ. ಹುಡುಗನನ್ನೂ ಅವನ ಗೊಂಬೆ ಯನ್ನೂ ಗುಳುಂ ಅಂತ ನುಂಗಿ ಹಾಕುತ್ತಾನೆ.
ಹೇಗಾದರೂ ಮಾಡಿ ಹುಲಿಯಿಂದ ಹುಡುಗ ನನ್ನು ಪಾರುಮಾಡಬೇಕು ಅಂತ ಕಾಡುಹಕ್ಕಿಗಳು ನಿಶ್ಚಯಿಸಿದವು. ಪುಟ್ಟ ಹಕ್ಕಿ ರಪ ರಪ ರೆಕ್ಕೆ ಆಡಿಸಿ ಬಾಗಿಲು ಬಡಿಯಿತು. ಹುಡುಗನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನೋಡುತ್ತಾನೆ; ಕಾರಿನ ಹೊರಗೆ ಎರಡು ಪುಟ್ಟ ಹಕ್ಕಿಗಳು ಹಾರಾಡ್ತಾ ಇವೆ! ಎಷ್ಟು ಚೆಲುವಾದ ಹಕ್ಕಿಗಳು ಅವು! ಹುಡುಗ ಥಟ್ಟನೆ ಎದ್ದು ಕೂತ!.
ಒಂದು ನೀಲಿ ಹಕ್ಕಿ. ಇನ್ನೊಂದು ಕೆಂಪು ಹಕ್ಕಿ. ನೀಲಿ ಹಕ್ಕಿಯ ಕಣ್ಣು ನಕ್ಷತ್ರದ ಹಾಗೆ ಹೊಳೀತಾ ಇದೆ. ಹುಡುಗ ಬೊಂಬೆ ಹಕ್ಕಿಯನ್ನು ತನ್ನ ಎದೆಗೆ ಅವಚಿಕೊಂಡು, ‘ಹಲ್ಲೋ… ನೀಲಿ ಹಕ್ಕಿ… ನಿನ್ನ ಹೆಸರೇನು?’ ಅಂದ.
ನೀಲಿ ಹಕ್ಕಿ ತಾನೂ ನಕ್ಕು, ‘ನನ್ನ ಹೆಸರು ಆಕಾಶಾ… ನಿನ್ನ ಹೆಸರು?’ ಅಂತು ಹುಡುಗ, ‘ನನ್ನ ಹೆಸರು ಪುಟ್ಟ ಅಂತ… ಇನ್ನೊಂದು ಹಕ್ಕಿ ಇದೆಯಲ್ಲ, ಅದು ಯಾರು?’ ಅಂದ.
ನೀಲಿ ಹಕ್ಕಿ, ‘ಅವಳು ನನ್ನ ಅಕ್ಕ… ಅವಳ ಹೆಸರು ಮೇಘಾ ಅಂತ. ನಿನ್ನ ಗೊಂಬೇ ಗಿಳಿ ಹೆಸರು?’ ಎನ್ನುತ್ತಾ ಕಿಟಕಿಯ ಪಕ್ಕ ಹಾರಿ ಬಂದು ಕೂತುಕೊಂಡಿತು. ಪುಟ್ಟ ಕಾರಿನ ಗಾಜು ಕೆಳಗೆ ಇಳಿಸಿದ. ಈಗ ನೀಲಿ ಹಕ್ಕಿ ಪುರ್್ರ ಅಂತ ಕಾರಿನ ಒಳಗೆ ಬಂದು, ಪುಟ್ಟುವಿನ ಮುಂದೇ ಕೂತುಕೊಂಡಿತು.
ಪುಟ್ಟು ‘ನನ್ನ ಬೊಂಬೆ ಹಕ್ಕಿ ಹೆಸರು ಏನು ಗೊತ್ತಾ? ಚಿಲಿಮಿಲಿಚಿನ್ನಿ…!’ ಅಂದ.
“ಓಹೋ ಚಿಲಿಮಿಲಿಚಿನ್ನಿ… ಚಿಲಿಮಿಲಿಚಿನ್ನಿ… ಚೆನ್ನಾಗಿದೆ ಚೆನ್ನಾಗಿದೆ’ ಎಂದು ಕನ್ನಡ ಅಭಿವೃದ್ಧಿ ಕಾಡುಹಕ್ಕಿಗಳು ಖುಷಿಗೆ ಕಾರಿನ ತುಂಬಾ ಹಾರಾಡಿದವು…!
ಪುಟ್ಟು ಮತ್ತು ಕಾಡುಹಕ್ಕಿಗಳು ಐದೇ ನಿಮಿಷದಲ್ಲಿ ಆಪ್ತಗೆಳೆಯರಾಗಿ ಹೋದರು.
ಪುಟ್ಟು ಕಾಡು ನೋಡುವುದಕ್ಕೇ ಅಂತ ಅಪ್ಪ ಅಮ್ಮನ ಜತೆ ಬಂದನಂತೆ. ಯಾವಾಗಲೋ ಅವನಿಗೆ ನಿದ್ದೆ ಬಂದುಬಿಟ್ಟಿದೆ. ‘ಎಚ್ಚರ ಆದಾಗ ಕಣ್ಣುಬಿಟ್ಟರೆ ಕಂಡದ್ದು ಅಪ್ಪ ಅಮ್ಮ ಅಲ್ಲ, ನೀವು!’ ಅಂತ ಪುಟ್ಟು ಅಳುಮುಖ ಮಾಡಿದ.
ಹಕ್ಕಿಗಳು ಅವನಿಗೆ ಸಮಾಧಾನ ಹೇಳಿದವು. ‘ನಿನಗೆ ಹಣ್ಣು ತರೋದಕ್ಕೆ ನಿನ್ನ ಅಪ್ಪ ಅಮ್ಮ ಇಲ್ಲೇ ಎಲ್ಲೋ ಹೋಗಿರಬೇಕು… ಯೋಚನೆ ಮಾಡಬೇಡ. ಅವರು ಬರೋವರೆಗೂ ನಾವು ನಿನ್ನ ಜತೆ ಇರ್ತೀವಿ…!’ ಅಂತ ಧೈರ್ಯ ಹೇಳಿದವು.
ಅದೇ ಸಮಯಕ್ಕೆ ದೂರದಿಂದ ಗುರ್… ಗುರ್… ಅಂತ ಹುಲಿಯ ಗರ್ಜನೆ ಕೇಳಿಸ್ತು.
‘ಬೇಗ ಕಿಟಕಿ ಮುಚ್ಚು’ ಅಂತ ನೀಲಿ ಹಕ್ಕಿ ಕೂಗಿ ಪುರಂತ ಕಾರಿನ ಹೊರಗೆ ಹಾರಿತು. ಪುಟ್ಟು ಭಯದಿಂದ ನಡುಗುತ್ತಾ ‘ಯಾಕೆ? ಯಾರು ಬರ್ತಾ ಇದ್ದಾರೆ? ಏನದು ಗುರ್… ಗುರ್… ಅಂತ ಸದ್ದಾದದ್ದೂ…? ಎಂದು ನೀಲಿ ಹಕ್ಕಿಯನ್ನು ಕೇಳಿದ.
‘ಷ್… ಕೆಲ್ಲೆ ಬಗ್ಗು…’ ಅಂತ ಹಕ್ಕಿ ಪಿಸುಗುಟ್ಟಿತು. ಎರಡೂ ಹಕ್ಕಿಗಳೂ ಹಾರಿ ಮರದ ಮೇಲೆ ಕೂತವು.
ಆಗ ಬಂತು ನೋಡಿ ಆ ಏಳು ಪಟ್ಟೆ ಹುಲಿ!
ಅಬ್ಬ! ಅದು ಗುರ್ರ್ ಅಂದರೆ ಗುಡುಗು ಅದರ ತೆರೆದ ಬಾಯಿಂದ ಉರುಳಿ ಬೀಳುತ್ತಾ ಇರುವ ಹಾಗಿತ್ತು. ಕಣ್ಣುಗಳೋ ಬೆಂಕಿಯ ಉಂಡೆಗಳಂತೆ ಧಗ ಧಗ ಧಗ ಉರೀತಾ ಇದ್ದವು.
‘ಯಾರದು ಕಾರಲ್ಲಿ ಇರೋರು?’ ಅಂತ ಹುಲಿರಾಯ ಗಟ್ಟಿಯಾಗಿ ಕೂಗಿದ. ಯಾರಾದರೂ ಇಷ್ಟು ಗಟ್ಟಿಯಾಗಿ ಮಾತನಾಡಿದ್ದನ್ನು ಈವರೆಗೂ ಪುಟ್ಟು ಕೇಳಿಯೇ ಇರಲಿಲ್ಲ!
ಪುಟ್ಟು ಕಾಡುಹಕ್ಕಿಯ ಸಲಹೆಯಂತೆ ಸೀಟಿನ ಮರೆಯಲ್ಲಿ ಅವಿತುಕೊಂಡು ಕುಳಿತಿದ್ದ. ಹರಾ ಅನ್ನಲಿಲ್ಲ. ಶಿವಾ ಅನ್ನಲಿಲ್ಲ.
ಹುಲಿರಾಯ ಕಾರಿನ ಹತ್ತಿರ ಬಂದು ಕಿಟಕಿಯಲ್ಲಿ ಇಣಿಕಿ ನೋಡಿದ. ಯಾರೂ ಕಾಣಲಿಲ್ಲ. ನಿಧಾನವಾಗಿ ಬಾಯಿ ತೆರೆದು… ಆ… ಅಂತ ಆಕಳಿಸಿದ. ‘ಹೂ…! ಬರೀ ಖಾಲೀ ಕಾರು… ತಿಂಡಿ ಇರದ ಖಾಲಿ ಡಬ್ಬದ ಹಾಗೆ…’ ಎಂದು ಗೊಣಗುತ್ತಾ ಹುಲಿರಾಯ ಬಾಲ ಬೀಸಿಕೊಂಡು ಹೊರಟೇ ಹೋದ…!
ಆಗ ಕತ್ತಲಾಗಿತ್ತು. ಟಾರ್ಚು ಹಾಕಿಕೊಂಡು ಹೋಗೋ ನೈಟ್ ಬೀಟಿನ ಪೊಲೀಸ್ ಹಾಗೆ ಕಂಡಿತು ಆ ಹುಲಿ!
‘ಅಬ್ಬಬ್ಬ! ಹುಲಿಗೆ ನಾನು ಕಾಣಲೇ ಇಲ್ಲ!’ ಎಂದು ಪುಟ್ಟ ಖುಷಿಯಲ್ಲಿ ಕಿಸಿಕಿಸಿ ನಕ್ಕ. ಗುರ್… ಗುರ್್ರ… ಗುಡುಗು ಕಾಡ ಕಣಿವೆಯಲ್ಲಿ ಉರುಳಿ ಉರುಳಿ ದೂರವಾಗುತ್ತಾ ಪುಟ್ಟ ಈಗ ಮರದ ಮೇಲೆ ನೋಡಿದ. ನೀಲಿ ಹಕ್ಕಿ ಮಾತ್ರ ಕಂಡಿತು. ಒಂದೇ ನಿಮಿಷ!
ಕೆಂಪು ಹಕ್ಕಿ… ಭೂ… ಭೂ… ಅಂತ ಕೂಗುತ್ತಾ ಹಾರಿ ಬಂತು…!
ಆದರೆ ಜತೆಯಲ್ಲಿ ಪುಟ್ಟುವಿನ ಅಪ್ಪ ಅಮ್ಮ ಕೂಡಾ ಇದ್ದರು. ಅವರಿಗೆ ಕಾಡಿನಲ್ಲಿ ದಾರಿ ತಪ್ಪಿ ಹೋಗಿತ್ತಂತೆ. ಈ ಕೆಂಪು ಹಕ್ಕಿ, ಹೋಗಿ ಅವರನ್ನು ಪತ್ತೆ ಮಾಡಿ, ಪುಟ್ಟುವಿನ ಬಳಿ ಅವರನ್ನು ಕರೆದುಕೊಂಡು ಬಂದಿತ್ತು!
ಕಾಡುಹಕ್ಕಿಗಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಪುಟ್ಟುವಿಗೆ ತೃಪ್ತಿಯಿಲ್ಲ.
‘ಬರ್ತೇವೆ…! ಬರ್ತೇವೆ…! ಪುಟ್ಟೂ ಬರ್ತೇವೋ…!’ ಎನ್ನುತ್ತಾ ನೀಲಿ ಹಕ್ಕಿ, ಕೆಂಪು ಹಕ್ಕಿ ಕಾಡಿನ ಕತ್ತಲಲ್ಲಿ ಮಂಗಮಾಯವಾದವು!
‘ಬಾಯ್’ ಎಂದು ಪುಟ್ಟು ಕಾರಿನ ಕಿಟಕಿಯಲ್ಲಿ ಕೈ ಆಡಿಸುತ್ತಲೇ ಇದ್ದ…! ಕಾರು, ಕಣಿವೆಯ ಹಾದಿಯಲ್ಲಿ ಸುರ್ರ್ ಅಂತ ಓಡುತ್ತಾ ಇತ್ತು!
ಕೃಪೆ: ಮಕ್ಕಳ ಅಭಿವೃದ್ಧಿ ಪ್ರಾಧಿಕಾರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….