ಬೆಂಗಳೂರು, (ಜುಲೈ.23); ಲೋಕಸಭೆಯಲ್ಲಿ ಇಂದು ಮಂಡಿಸಲಾದ 2024-25ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನಗ ಅವರು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿಜೀ ಅವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ ಎಂದು ಬಿಜೆಪ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಬಜೆಟ್ ಕುರಿತು ಟ್ವಿಟ್ ಮಾಡಿರುವ ಅವರು, ದೇಶದ ಅರ್ಥ ವ್ಯವಸ್ಥೆಗೆ ಶರವೇಗ ನೀಡುವ ನಿಟ್ಟಿನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಹಣದುಬ್ಬರವನ್ನು ನಿಯಂತ್ರಿಸಲಿದ್ದು ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ ಮೀಸಲಿರಿಸಿ, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ನೀಡುವ ಮೂಲಕ ರೈತರ ಏಳಿಗೆಗೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿರುವುದು ರೈತರು ಹಾಗೂ ಸ್ತ್ರೀ ಕುಲದ ಬಗೆಗಿನ ಅದಮ್ಯ ವಿಶ್ವಾಸವನ್ನು ಸಂಕೇತಿಸಿದೆ.
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುವ ಮೂಲಕ ಯುವ ಸಮುದಾಯದಕ್ಕೆ ಸ್ವಾವಲಂಬಿ ಹಾಗೂ ಉದ್ಯೋಗ ಸೃಷ್ಟಿಗೆ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡಲು ಮನ್ನಣೆ ದೊರಕಿರುವುದು ನಿಜಕ್ಕೂ ಪ್ರಶಂಸನೀಯ ಹೆಜ್ಜೆಯಾಗಿದೆ.
ಅಂತೆಯೇ ಭಾರತದ ಆರ್ಥಿಕ ಸಂಪನ್ಮೂಲ ಕ್ರೂಡೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆದಾರನಿಗೆ ಹೊರೆಯಾಗದಂತೆ ವಿತ್ತ ಸಚಿವರು ಎಚ್ಚರವಹಿಸಿ ಜಾಣ್ಮೆತೋರಿದ್ದಾರೆ. ಉಚಿತ ಪಡಿತರ ಯೋಜನೆ 2029ರ ವರೆಗೆ ಮುಂದುವರೆಸಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುವ ಮೂಲಕ ಬಡವರ ಬಗೆಗಿನ ಕಾಳಜಿಯಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ.
ಸತತ 7ನೇ ಬಾರಿಗೆ ಅತ್ಯುತ್ತಮ ಹಾಗೂ ಪ್ರಗತಿದಾಯಕ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವೆ ಎಂದಿದ್ದಾರೆ.
ಅಶೋಕ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ ಹಾಗೂ ದೇಶದ ಭವಿಷ್ಯ ಬರೆಯುವ ಸುಭದ್ರ ಬಜೆಟ್ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಶ್ಲಾಘಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಈ ಆಯವ್ಯಯವು ಭಾರತ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗಲಿದೆ. ರೈತರು, ಮಹಿಳೆಯರು, ಯುವಜನರು, ತೆರಿಗೆ ಪಾವತಿಸುವವರ ಬದುಕನ್ನು ವಿಶ್ಲೇಷಿಸಿ ಅವರ ಅನುಕೂಲಕ್ಕೆ ತಕ್ಕಂತಹ ಬಜೆಟ್ ನೀಡಲಾಗಿದೆ. ಇದಕ್ಕಾಗಿ ಆರ್ಥಿಕ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಯಾವಾಗಲೂ ಅನುದಾನ ತಾರತಮ್ಯದ ಬಗ್ಗೆ ಹೇಳುತ್ತದೆ. 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ ನೀಡುವ *ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್* ಅನ್ನು ಕೇಂದ್ರ ಸರ್ಕಾರ ಇನ್ನೂ 1 ವರ್ಷ ಮುಂದುವರಿಸಲಿದೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಖಾಲಿ ಖಜಾನೆಯ ರಾಜ್ಯ ಸರ್ಕಾರ ಇಂತಹ ಯೋಜನೆಗಳನ್ನು ಬಳಸಿಕೊಂಡಾದರೂ ಜನಕಲ್ಯಾಣಕ್ಕೆ ಶ್ರಮಿಸಲಿ ಎಂದು ಅವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಮುಂದುವರಿಸಲು ಹಾಗೂ ಅಕ್ಕಿ ನೀಡಲು ಇನ್ನೂ ತಿಣುಕಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು 5 ವರ್ಷ ವಿಸ್ತರಿಸಿ, 80 ಕೋಟಿ ಜನರಿಗೆ ಆಹಾರ ಭದ್ರತೆ ಕಲ್ಪಿಸಿದೆ. ಕ್ಯಾನ್ಸರ್‌ನ 3 ಔಷಧಿಗಳ ಮೇಲಿನ ಕಸ್ಟಮ್ ತೆರಿಗೆ ರದ್ದುಪಡಿಸಿ, ರೋಗಿಗಳ ಕುಟುಂಬಕ್ಕೆ ವೆಚ್ಚ ಕಡಿಮೆ ಮಾಡಲಾಗಿದೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ.6 ರಷ್ಟು ಕಡಿತ, ಮೊಬೈಲ್ ಹಾಗೂ ಚಾರ್ಜರ್‌ಗಳ ಮೇಲಿನ ತೆರಿಗೆ ಇಳಿಕೆ ಮೊದಲಾದ ಶ್ಲಾಘನೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಇದು ಬೆಲೆ ಇಳಿಕೆಯ ಸುರಕ್ಷಿತ ಬಜೆಟ್ ಎಂದು ಅವರು ಬಣ್ಣಿಸಿದ್ದಾರೆ.
ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಿಂದ* ಹೊಸ ಉದ್ಯೋಗಗಳು ಸೃಷ್ಟಿಯಾಗಿ ಜನರಿಗೆ ಸುಭದ್ರ ಬದುಕು ಸಿಗಲಿದೆ. ಈ ದೂರದೃಷ್ಟಿಯ ಯೋಜನೆಯಿಂದ ರಾಜಧಾನಿ ಬೆಂಗಳೂರು ತನ್ನ ಹಿರಿಮೆಯನ್ನು ಉಳಿಸಿಕೊಳ್ಳಲಿದೆ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದೆ. ಇದಕ್ಕೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಆರ್.ಅಶೋಕ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ, 1 ಕೋಟಿ ಕುಟುಂಬಗಳಿಗೆ 300 ಯುನಿಟ್ ವಿದ್ಯುತ್, ಮುದ್ರಾ ಯೋಜನೆಯಡಿ 20 ಲಕ್ಷ ರೂ. ಸಾಲ, 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3 ಬಡ್ಡಿ ದರದ ಸಾಲ ಮೊದಲಾದ ಯೋಜನೆಗಳು ಜನಕಲ್ಯಾಣಕ್ಕೆ ಹೊಸ ದಿಕ್ಕು ನೀಡಿದೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದ ಭಾರತದ ಯುವಕರ ಬಜೆಟ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರದ ಬಜೆಟ್ ನಂತರ ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆರ್ಥಿಕತೆಯ ಸುಧಾರಣೆಯಿಂದ ವಿಶ್ವದಲ್ಲಿಯೇ ಭಾರತ ಬೆಳೆಯುತ್ತಿರುವ ರಾಷ್ಟ್ರ ಎನ್ನುವುದನ್ನು ಈ ಬಜೆಟ್ ತೋರಿಸುತ್ತದೆ. ಹಣದುಬ್ಬರ ಸೀಮಿತಗೊಳಿಸಿರುವುದು, ಹೆಚ್ಚು ಜನರಿಗೆ ಕೆಲಸ ಕೊಡಿಸಿರುವುದು ಹತ್ತು ವರ್ಷದಲ್ಲಿ ಮಾಡಿರುವುದರ ಫಲವಾಗಿ ವಿಕಸಿತ ಭಾರತ ಮಾಡುವ ಹತ್ತು ವರ್ಷದ ಫಲವನ್ನು ಬರುವ ದಿನಗಳಲ್ಲಿ ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾದ ಬಜೆಟ್ ಇದಾಗಿದೆ ಎಂದು ಹೇಳಿದರು.
ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1.5 ಲಕ್ಷ ಕೋಟಿ, ಉದ್ಯೋಗ, ಕೌಶಲ್ಯಾಬಿವೃದ್ಧಿಗೆ 1.5 ಲಕ್ಷ ಕೋಟಿ, ಮುದ್ರಾ ಯೋಜನೆಯಲ್ಲಿ ಸಾಲ ನೀಡುವ ಪ್ರಮಾಣವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ ಮಾಡಿರುವುದು, ಗ್ರಾಮೀಣಾಭಿವೃದ್ಧಿ ಅಭಿವೃದ್ಧಿಗೆ 1 ಲಕ್ಷ ಕೋಟಿ, ಬಡವರಿಗೆ 3 ಕೋಟಿ ಮನೆ ಕೊಡುವುದು, ಕೃಷಿ ವಲಯಕ್ಕೆ ಬಹಳ ಒತ್ತು ಕೊಟ್ಟಿದ್ದು, ಕೃಷಿ ಉತ್ಪಾದನೆ ಹೆಚ್ಚಳ ಮತ್ತು ಸಂಸ್ಕರಣೆಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಉತ್ಪಾದನಾ ವಲಯದಲ್ಲಿ ವಿಶೇಷವಾಗಿ ಸಣ್ಣ ಕೈಗಾರಿಕೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಸೇವಾ ವಲಯವೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮೂರು ವಲಯದಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡಲು ದೇಶದ ಆರ್ಥಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ವಲಯಗಳಾದ ಶಿಕ್ಷಣ, ಆರೋಗ್ಯ ಉದ್ಯೋಗಕ್ಕೆ ಹೆಚ್ಚಿನ ಹಣ ನೀಡಿರುವುದು ಸ್ವಾಗತಾರ್ಹ ವಿಷಯ. ಮೂಲ ಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿಗಿಂತ ಹೆಚ್ಚು ಹಣ ನೀಡಿದ್ದಾರೆ. ಮಹಿಳೆಯ ಸಬಲೀಕರಣಕ್ಕೆ ವಿಶೇಷ ಕಾನೂನು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ.
ವಿದ್ಯುತ್ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ನವೀಕರಣ ಇಂಧನಕ್ಕೆ ಮಹತ್ವ ನೀಡಿದ್ದು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಸುಮಾರು ಒಂದು ಕೋಟಿ ಜನರಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಈಗಾಗಲೇ ಒಂದು ಲಕ್ಷ ಜನರು ಹೆಸರು ನೋಂದಾಯಿಸಿರುವುದು ದಾಖಲಾಗಿದೆ ಎಂದು ಹೇಳಿದರು.
ಸಾಮಾನ್ಯ ಜನರ ತೆರಿಗೆ ಕಡಿಮೆ ಮಾಡಿದ್ದು, ಮೂರು ಲಕ್ಷದವರೆಗೂ ಯಾವುದೇ ತೆರಿಗೆಯಿಲ್ಲ. ಮೂರು ಲಕ್ಷದಿಂದ 5 ಲಕ್ಷದವರೆಗೆ ಶೇ 5% ರಷ್ಟು ತೆರಿಗೆ ವಿಧಿಸಿ ತೆರಿಗೆ ಕಡಿಮೆ ಮಾಡಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಶಿಸ್ತು ಕಾಪಾಡಿರುವುದು ಮುಖ್ಯವಾಗಿದೆ. ವಿತ್ತಿಯ ಕೊರತೆ 5.3% ರಿಂದ 4.7 ಕ್ಕೆ ಇಳಿಸಿದ್ದು, ಮುಂದಿನ ವರ್ಷ 4.5% ಕ್ಕೆ
ಇಳಿಸುವಂಥದ್ದು ಹಾಗೂ ವಿದೇಶಿ ನೇರ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವಂತೆ ಅನುಕೂಲ ಮಾಡಿದ್ದು, ಸರ್ಕಾರದ ಸಾಲ ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದು ಭವಿಷ್ಯದ ಭಾರತದ ಯುವಕರ ಬಜೆಟ್ ಆಗಿದೆ ಎಂದು ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….