ದೊಡ್ಡಬಳ್ಳಾಪುರ, (ಮೇ.10): ತಾಲೂಕಿನ ವಿವಿದೆಡೆಗಳಲ್ಲಿ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್‍ಯಕ್ರಮವನ್ನು ಆಚರಿಸಲಾಯಿತು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನೆಲಮಂಗಲ ತಹಸೀಲ್ದಾರ್ ಅಮೃತ್ ಆತ್ರೇಯ ಮಾತನಾಡಿ, ಬಸವಣ್ಣ ಒಬ್ಬ ಸಾಮಾಜಿಕ ವ್ಯಕ್ತಿಯಾಗಿ, ರಾಜಕಾರಣಿಯಾಗಿ, ಅನುಭಾವಿಯಾಗಿದ್ದರು. 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಪ್ರಜಾಪ್ರಭುತ್ವ ಆಡಳಿತಕ್ಕೆ ಬುನಾದಿ ಹಾಕಿದ್ದರು. ಸಮಾಜದಲ್ಲಿನ ಅಂಕುಡೊಂಕುಗಳು, ಅಸಮಾನತೆ ವಿರುದ್ದ ಹೋರಾಟ ನಡೆಸಿದ್ದರು. ಅವರ ವಚನಗಳಲ್ಲಿ ಬದುಕಿನ ಮೌಲ್ಯಗಳು ಅಡಗಿವೆ ಎಂದು ಬಸವಣ್ಣನವರ ಕೊಡುಗೆಯನ್ನು ಸ್ಮರಿಸಿದರು.
ವೇಮನ ರೆಡ್ಡಿ ಜನಸಂಘದ ಉಪಾಧ್ಯಕ್ಷ ಶಿವಾರೆಡ್ಡಿ ಮಾತನಾಡಿ, ಮಹಾಸಾದ್ವಿ ಹೇಮ ರೆಡ್ಡಿ ಮಲ್ಲಮ್ಮನವರು ತಮ್ಮ ಕಾಯಕದ ಮೂಲಕ ಜನಾನುರಾಗಿಯಾಗಿದ್ದರು. ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನ ನಡೆಸಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿzರೆ. ತಮ್ಮ ಕಾಯಕದ ಮೂಲಕ ಬದುಕಿನ ಮೌಲ್ಯಗಳನ್ನು ತಿಳಿಸಿದ್ದಾರೆ. ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ ಎಂದು ಸಾಧಿಸಿ ತೋರಿಸಿದ್ದಾರೆ ಎಂದರು.
ಕಾರ್‍ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಸಂಘದ ತಾಲೂಕು ಅಧ್ಯಕ್ಷ ಎಸ್.ಜಿ.ಸೋಮರುದ್ರಶರ್ಮ, ಕಾರ್‍ಯದರ್ಶಿ ಪುಟ್ಟಬಸವರಾಜು, ಗ್ರೇಡ್-೨ ತಹಸೀಲ್ದಾರ್ ಪ್ರಕಾಶ್, ಕಸಬಾ ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು, ವೀರಶೈವ ಮುಖಂಡರಾದ ಮುತ್ತಣ್ಣ, ಲೋಕೇಶ್, ರೆಡ್ಡಿ ಸಮುದಾಯದ ಮುಖಂಡರಾದ ಕೆ.ಎನ್.ಹನುಮಂತರೆಡ್ಡಿ, ವೆಂಕಟರಾಮ ರೆಡ್ಡಿ, ಜಯರಾಮ ರೆಡ್ಡಿ, ರಾಮಚಂದ್ರ ರೆಡ್ಡಿ, ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.
ತೂಬಗೆರೆಯಲ್ಲಿ ಸಂಭ್ರಮದಿಂದ ಬಸವಜಯಂತಿ ಆಚರಣೆ: ತಾಲೂಕಿನ ತೂಬಗೆರೆ ವೀರಶೈವ ಲಿಂಗಾಯತ ಸಮಾಜದವತಿಯಿಂದ ಬಸವ ಜಯಂತಿ ಪ್ರಯುಕ್ತ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸವಮೂರ್ತಿಗೆ ಪೂಜೆ ಸಲ್ಲಿಸಿ ಪುಶ್ವಾರ್ಚನೆ ಮಾಡಿ ಪ್ರಸಾದ ವಿನಿಯೋಗ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಮುಖಂಡ ಉದಯ ಆರಾಧ್ಯ ರವರು ಮಾತನಾಡಿ ಶಿವನ ವಾಹನ ನಂದಿ ಹುಟ್ಟಿದ ದಿನವೇ ಬಸವ ಜಯಂತಿ, ಆದ್ದರಿಂದ ಈ ದಿನ ಹಸು-ಎತ್ತುಗಳನ್ನು ಪೂಜಿಸಿ ವಿಶೇಷ ಭಕ್ಷಗಳನ್ನು ನೀಡುವುದರ ಮೂಲಕ ಆಚರಿಸಬೇಕು, ಎಂದು ಬಸವ ತತ್ವ ವಿರೋಧಿಗಳು, ಜನಸಾಮಾನ್ಯರಲ್ಲಿ ಮೌಢ್ಯ ಬಿತ್ತಿದ್ದಾರೆ. ಬಸವಣ್ಣನವರ ವಿಚಾರಧಾರೆಗಳು ತಲುಪಬಾರದು ಎಂಬ ವ್ಯವಸ್ಥಿತ ಹುನ್ನಾರ ಈ ಮೌಢ್ಯದ ಹಿಂದಿದೆ.
ನಿಜವಾದ ಬಸವ ಜಯಂತಿ ಎಂದರೆ ತಮ್ಮ ಮನೆಯ ಹಸುಗಳು ಎತ್ತುಗಳನ್ನು ಪೂಜಿಸುವುದರ ಜೊತೆಗೆ, ಮನುಷ್ಯ ಮನುಷ್ಯರ ನಡುವೆ ವರ್ಣ, ಜಾತಿ, ಲಿಂಗ ಭೇದ ಬೇರೂರಿದ್ದ ಕಾಲದಲ್ಲಿ, ಸಮಾನತೆ, ಸಹೋದರತೆ, ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಮೂಲಕ ಅನುಷ್ಠಾನಗೊಳಿಸಲು ಮುಂದಾದ ಮಹಾ ಮಾನವತಾವಾದಿ, ಬಸವಣ್ಣ ಮತ್ತು ಅವರ ವಿಚಾರಧಾರೆಗಳನ್ನು ನೆನೆಯುವ ದಿನವಾಗಬೇಕು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮೌಢ್ಯ ತೊಲಗಿಸಿ ವೈಚಾರಿಕತೆ ಬೆಳಸಿಕೊಂಡು ಇತರರಲ್ಲಿ ಅದನ್ನು ಮೂಡಿಸುವುದೆ ಬಸವಣ್ಣನವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ ಎಂದು ಅಭಿಪ್ರಾಯ ಪಟ್ಟರು.
ವಾದ್ಯ-ಮೇಳದೊಂದಿಗೆ ಆರತಿ ಗಳನ್ನು ಹಿಡಿದ ಹೆಂಗಸರು, ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ಗೆ ಸ್ವಾಮಿ ಅರ್ಪಿಸಿದರು.
ನೂರಾರು ಭಕ್ತರು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಬಸವ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು.
ವಿಶೇಷ ಪೂಜಾ ಕಾರ್ಯಕ್ರಮಗಳು ನಂತರ ಸಂಜೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು ಮಹಿಳಾ ವೀರಗಾಸೆ ಸೇರಿದಂತೆ ಅನೇಕ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….