ನವದೆಹಲಿ, (ಜೂ.07); ಮುಂದಿನ 10 ವರ್ಷಗಳಲ್ಲಿ ಎನ್‌ಡಿಎ ಸರ್ಕಾರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ, ಸಾಮಾನ್ಯ ಜನರ ಜೀವನವನ್ನು ಮತ್ತಷ್ಟು ಸುಧಾರಿಸಲು ಸರ್ಕಾರವು ಒತ್ತು ನೀಡುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಸಂಸತ್ತಿಗೆ ಆಯ್ಕೆಯಾಗಿರುವ ನಾಯಕರ ಸಭೆ ನಡೆಯಿತು.
ಪ್ರಧಾನಿ ಮೋದಿ ಕಾಣುತ್ತಿದ್ದಂತೆಯೇ ಹಾಲ್ ನಲ್ಲಿದ್ದ ಸದಸ್ಯರೆಲ್ಲ ಎದ್ದುನಿಂತು ಚಪ್ಪಾಳೆ ಮೂಲಕ ಅವರನ್ನು ಸ್ವಾಗತಿಸಿದರು.
ಎನ್‌ಡಿಎ ಸಭೆಯಲ್ಲಿ ಮಾತನಾಡಿದ ಮೋದಿ, ನಾವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸಹಭಾಗಿತ್ವದ ಹೊಸ ಅಧ್ಯಾಯವನ್ನು ಬರೆಯುತ್ತೇವೆ. ನಾವೆಲ್ಲರೂ ಸೇರಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡುತ್ತೇವೆ” ಎಂದ ಅವರು, ”ನಮ್ಮ ದೇಶದಲ್ಲಿ 10 ರಾಜ್ಯಗಳಲ್ಲಿ ನಮ್ಮ ಬುಡಕಟ್ಟು ಸಹೋದರರ ಸಂಖ್ಯೆ ಹೆಚ್ಚಿದೆ. ಈ 10 ರಾಜ್ಯಗಳ ಪೈಕಿ 7 ರಾಜ್ಯಗಳಲ್ಲಿ ಎನ್‌ಡಿಎ ಕಾರ್ಯನಿರ್ವಹಿಸುತ್ತಿದೆ. ಆ ರಾಜ್ಯಗಳಲ್ಲಿಯೂ ಸೇವೆ ಸಲ್ಲಿಸಲು ಎನ್‌ಡಿಎಗೆ ಅವಕಾಶ ಸಿಕ್ಕಿದೆ ಎಂದರು.
ಎಲ್ಲರೂ ನನ್ನನ್ನು ಎನ್‌ಡಿಎ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದು ನನ್ನ ಅದೃಷ್ಟ, ನೀವೆಲ್ಲರೂ ನನಗೆ ಹೊಸ ಜವಾಬ್ದಾರಿ ನೀಡಿದ್ದೀರಿ ಮತ್ತು ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. 2019ರಲ್ಲಿ ನಾನು ಈ ಸಂಸತ್ನಲ್ಲಿ ಮಾತನಾಡುವಾಗ, ನೀವೆಲ್ಲರೂ ನನ್ನನ್ನು ನಾಯಕನನ್ನಾಗಿ ಆರಿಸಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೇನೆ, ಇಂದು ನೀವು ನನಗೆ ಈ ಪಾತ್ರವನ್ನು ನೀಡುತ್ತಿರುವಾಗ, ನಮ್ಮ ನಡುವಿನ ನಂಬಿಕೆಯ ಸೇತುವೆ ಗಟ್ಟಿಯಾಗಿದೆ ಎಂದು ಅರ್ಥ ಎಂದು ತಿಳಿಸಿದರು.
ಇದಕ್ಕೂ ಮುನ್ನ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮೋದಿ ಅವರನ್ನು ಬೆಂಬಲಿಸಿದರು.
ಪ್ರಧಾನಿ ಮೋದಿ ಜೂ. 9 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಅಂದೇ ಸಚಿವ ಸಂಪುಟವ ನಿರ್ಧಾರವಾಗುವ ಸಾಧ್ಯತೆಯಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….