ದೊಡ್ಡಬಳ್ಳಾಪುರ, (ಡಿ.29); ನಗರದ ಪ್ರತಿಷ್ಠಿತ ಎಂಎಸ್.ವಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ಸಂಕಲ್ಪ’ವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಶಾಲೆಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ.ಎ., ಇಂದು ನಾವು ಜಾಗತೀಕರಣ ಯುಗದಲ್ಲಿ ಬದುಕುತ್ತಿದ್ದೇವೆ. ವಿಜ್ಞಾನ ತಂತ್ರಜ್ಞಾನದಲ್ಲಿ ಉಂಟಾಗಿರುವ ನೂತನ ಆವಿಷ್ಕಾರಗಳಿಂದಾಗಿ ಅಂಗೈಯಲ್ಲಿ ಪ್ರಪಂಚ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಕು, ಬೇಡದ್ದವೆಲ್ಲ ಮೊಬೈಲ್ ನಲ್ಲಿಯೇ ನೋಡಬಹುದು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇವಲ ಜ್ಞಾನ ಸಂಪಾದನೆಗಾಗಿ ಮಾತ್ರ ಮೊಬೈಲ್ನ್ನು ಬಳಸಬೇಕು.
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಾವು ಖಚಿತ. ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಸಮಾಜಕ್ಕಾಗಿ ದುಡಿಯುವಂತಹ ವ್ಯಕ್ತಿಗಳು ನಾವಾಗಬೇಕು. ಸ್ವಾಮಿ ವಿವೇಕಾನಂದ, ಬುದ್ಧ, ಗಾಂಧಿ ಇವರೆಲ್ಲ ಈಗಲೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆಂದರೆ ಅದು ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಮಾತ್ರ. ಅಂತಹ ಸಮಾಜೋದ್ಧಾರಕ್ಕಾಗಿ ಶ್ರಮಿಸಿ ಜನರ ಮನಸ್ಸಲ್ಲಿ ಉಳಿಯುವಂತಹ ಸಾಧಕರು ನೀವಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಎಂಎಸ್ ವಿ ಪಬ್ಲಿಕ್ ಶಾಲೆ ಸತತವಾಗಿ 16 ವರ್ಷಗಳಿಂದಲೂ CBSE 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ತರುವುದರ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ.
ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ದೇಶದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ದೇಶ ಸೇವೆಯನ್ನು ಮಾಡುತ್ತಿರುವುದು ನೋಡಿದರೆ ಈ ಶಾಲೆ ಗುಣಮಟ್ಟ ಅರ್ಥವಾಗುತ್ತದೆ. ಉತ್ತಮವಾದ ಶಿಕ್ಷಣ, ಸಂಸ್ಕಾರ, ಶಿಸ್ತು ಕಲಿಸುವಲ್ಲಿ ಎಂಎಸ್ ವಿ ಶಾಲೆಯ ಕಾರ್ಯವೈಖರಿ ಆದರ್ಶಪ್ರಾಯವಾದುದು ಎಂದರು.
ಖ್ಯಾತ ಇತಿಹಾಸ ತಜ್ಞ, ಮೈಸೂರಿನ ಕಥೆಗಳ ಲೇಖಕರಾದ ಧರ್ಮೇಂದ್ರ ಕುಮಾರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಗುರಿ ಇರಬೇಕು. ಗುರಿಯಿಲ್ಲದ ಜೀವನಣ ಸೂತ್ರವಿಲ್ಲದ ಗಾಳಿ ಪಟ ಎರಡು ಒಂದೇ.. ಹೀಗಾಗಿ ವಿದ್ಯಾರ್ಥಿಗಳಾದ ತಾವುಗಳು ನಿಮ್ಮ ಸುಂದರವಾದ ಭವಿಷ್ಯತ್ತನ್ನು ಕುರಿತು ಗುರಿ ಇಟ್ಟುಕೊಳ್ಳಬೇಕು ಎಂದು ಸರ್.ಎಂ ವಿಶ್ವೇಶ್ವರಯ್ಯ ನವರ ಜೀವನದ ಒಂದು ಸಣ್ಣ ಘಟನೆಯನ್ನು ಉದಾಹರಣೆಯನ್ನು ನೀಡುವುದರ ಮೂಲಕ ಮಕ್ಕಳಲ್ಲಿ ಹೊಸ ಚಿಂತನೆಯ ಕಡೆಗೆ ಆಲೋಚಿಸುವಂತೆ ಪ್ರೇರೇಪಣೆ ನೀಡಿದರು.
ಶಾಲೆಯ ಸಂಸ್ಥಾಪಕರಾದ ಸುಬ್ರಮಣ್ಯ ಎ ಮಾತನಾಡಿ, ಈ ಪವಿತ್ರ ವಿದ್ಯಾ ಸಂಸ್ಥೆ ಆರಂಭಗೊಂಡು ಇಂದಿಗೆ ಸರಿಸುಮಾರು 16 ವರ್ಷಗಳಾಗುತ್ತ ಬರುತ್ತಿದೆ. ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಅವರಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟು ಬೆಳೆಸುವಲ್ಲಿ ನಮ್ಮ ಎಂಎಸ್ ವಿ ಶಾಲೆ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶಿಸ್ತು, ಸಂಸ್ಕಾರ ಕಲಿಸಿ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಬಲ್ಲ ಸತ್ಪ್ರಜೆಗಳ ನಿರ್ಮಾಣವೇ ನಮ್ಮ ಸಂಕಲ್ಪ. ಈ ನಿಟ್ಟಿನಲ್ಲಿ ನಾವು ಸದಾ ಅಚಲವಾಗಿ ಶ್ರಮಿಸುತ್ತೇವೆ ಎಂದರು
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಶಾಲೆಯ ಕಾರ್ಯದರ್ಶಿ ಮಂಜುಳಾ ಸುಬ್ರಹ್ಮಣ್ಯ, ಉಪಾಧ್ಯಕ್ಷ ಸ್ವರೂಪ್ ಟ್ರಸ್ಟಿ ನಯನ ಸ್ವರೂಪ್, ಶಾಲಾ ಪ್ರಾಂಶುಪಾಲರಾದ ರೆಮ್ಯ ಬಿ.ವಿ, ಸೇರಿದಂತೆ ಭೋದಕ ಭೋದಕೇತರ ಸಿಬ್ಬಂದಿಗಳು, ಸಾವಿರಾರು ಪೋಷಕರು ಭಾಗವಹಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….