ಬೆಂಗಳೂರು, (ನ.26): ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಜಿ.ಎಂ.ಕುಮಾರ್ ಅಲಿಯಾಸ್ ಬಿಟಿವಿ ಕುಮಾರ್ ಅವರನ್ನು ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಿಟಿವಿ ಸುದ್ದಿ ವಾಹಿನಿ ನಡೆಸುತ್ತಿರುವ ಈಗಲ್ ಸೈಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ಆರೋಪಿ.ಜಿ.ಎಂ.ಕುಮಾರ್ ಪಾಲುದಾರರಾಗಿದ್ದರು.ಇತರಪಾಲುದಾರರ ಗಮನಕ್ಕೆ ತರದೆ ಕಂಪನಿಯ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದು ಜನವರಿ 2018 ಮತ್ತು ಆಗಸ್ಟ್ 2022ರ ನಡುವೆ ಕೋಟ್ಯಂತರ ರೂ. ವಹಿವಾಟು ನಡೆಸಿದ್ದಾರೆ. ಈ ಮೂಲಕ ಕಂಪನಿಗೆ ವಂಚಿಸಿ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಈಗಲ್ ಸೈಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಪಾಲುದಾರ ಅಶ್ವಿನ್ ಮಹೇಂದ್ರ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದರು.
ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಮತ್ತು ಸೆಕ್ಷನ್ 420 (ವಂಚನೆ) ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹಲವು ಬಾರಿ ವಾರೆಂಟ್ ಹೊರಡಿಸಿದರೂ ಆರೋಪಿ ಕುಮಾರ್ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ನ.6ರಂದು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಇದರ ಬೆನ್ನಲ್ಲೇ ವಿಜಯನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಮುದ್ರಣ ಮಾಧ್ಯಮದಲ್ಲಿ ವರದಿಯಾಗಿದೆ.
ಡಿಬಾಸ್ ಅಭಿಮಾನಿಗಳ ಸಂಭ್ರಮಾಚರಣೆ; ಇನ್ನೂ ಕುಮಾರ್ ಅವರ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ನಟ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಮಾಡಿದ್ದು, ಪದೇ ಪದೇ ದರ್ಶನ್ ವಿರುದ್ಧ ಬಂಧನ ವರದಿ ಪ್ರಸಾರ ಮಾಡಿ ತೇಜೋವಧೆ ಮಾಡುತ್ತಿದ್ದವಗೆ ಕರ್ಮ ರಿಟರ್ನ್ಸ್ ಎಂದು ಕುಟುಕಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….