ಕೊಲಂಬೊ (ಸೆ.12): ಏಷ್ಯಾಕಪ್ 2023ರ ಸೂಪರ್ ನಾಲ್ಕು ಹಂತದ ಪಂದ್ಯಗಳು ನಡೆಯುತ್ತಿದ್ದು ನಿನ್ನೆ ಪಾಕಿಸ್ತಾನ ವಿರುದ್ಧ 228 ರನ್ ಗಳ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಇಂದು ಲಂಕಾ ವಿರುದ್ಧ ಪಂದ್ಯದಲ್ಲಿ 41 ರನ್ ಗಳ ಜಯ ಸಾಧಿಸಿದೆ.
ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಇಂದು ಲಂಕಾ ವಿರುದ್ಧ ಸೆಣೆಸಿದ್ದು. ಪಂದ್ಯದ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ರೋಹಿತ್ ಶರ್ಮಾ(53) ಹಾಗೂ ಶುಭಮನ್ ಗಿಲ್ (19) ಮೊದಲ ವಿಕೆಟ್ಗೆ 11 ಓವರ್ಗಳಲ್ಲಿ 80 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ವಿರಾಟ್ ಕೊಹ್ಲಿ (3), ಕೆ.ಎಲ್.ರಾಹುಲ್ (39), ಹಾರ್ದಿಕ್ ಪಾಂಡ್ಯ (5), ಇಶಾನ್ ಕಿಶನ್ 33 ರನ್ ಗಳಿಸಿ ಚರಿತ್ ಅಸಲಂಕಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್(26)ಗಳಿಸಿದರು. ಅಂತಿಮವಾಗಿ 49.1 ಓವರ್ಗಳಲ್ಲಿ ಟೀಮ್ ಇಂಡಿಯಾ 213 ರನ್ಗಳಿಸಿ ಆಲೌಟ್ ಆಯಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 41.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು ಕೊಂಡು 172 ರನ್ ಪಡೆಯುವ ಮೂಲಕ 41 ರನ್ ಅಂತರದಿಂದ ಸೋಲನ್ನನುಭವಿಸಿದರು.
214 ರನ್ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಬುಮ್ರಾ ಡಬಲ್ ಶಾಕ್ ನೀಡಿದರು. ತಂಡದ ಮೊತ್ತ 25 ಆಗುವಷ್ಟರಲ್ಲಿ ಪಾತುಮ್ ನಿಸ್ಸಂಕಾ (6) ಹಾಗೂ ಕುಸಾಲ್ ಮೆಂಡಿಸ್ (15)ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ದಿಮುತ್ ಕರುಣರತ್ನೆ (2) ವಿಕೆಟ್ ಪಡೆದರು.
ಆ ಬಳಿಕ ದಾಳಿಗಿಳಿದ ಕುಲ್ದೀಪ್ ಯಾದವ್ ಸದೀರ ಸಮರವಿಕ್ರಮ (17) ಹಾಗೂ ಚರಿತ್ ಅಸಲಂಕಾ (22) ವಿಕೆಟ್ ಉರುಳಿಸಿದರು. ಇನ್ನು ದಸುನ್ ಶಾನಕ (9) ಜಡೇಜಾಗೆ ವಿಕೆಟ್ ಒಪ್ಪಿಸಿ ಬಂದ ವೇಗದಲ್ಲೇ ಹಿಂತಿರುಗಿದರು. ಈ ಹಂತದಲ್ಲಿ ಜೊತೆಗೂಡಿದ ಧನಜಂಯ ಡಿಸಿಲ್ವಾ ಹಾಗೂ ದುನಿತ್ ವೆಲ್ಲಾಲಗೆ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು.
26ನೇ ಓವರ್ನಲ್ಲಿ 6 ವಿಕೆಟ್ ಪಡೆದಿದ್ದ ಟೀಮ್ ಇಂಡಿಯಾಗೆ ರವೀಂದ್ರ ಜಡೇಜಾ 38ನೇ ಓವರ್ನಲ್ಲಿ 7ನೇ ಯಶಸ್ಸು ತಂದು ಕೊಟ್ಟರು. ಟೀಮ್ ಇಂಡಿಯಾ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಧನಂಜಯ ಡಿಸಿಲ್ವಾ (41) ಅವರಿಗೆ ಕೊನೆಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ಜಡೇಜಾ ಯಶಸ್ವಿಯಾದರು.
ಇದರ ಬೆನ್ನ್ಲಲೇ ಹಾರ್ದಿಕ್ ಪಾಂಡ್ಯ ಮಹೀಶ್ ತೀಕ್ಷಣ ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಕೊನೆಯ ಎರಡು ವಿಕೆಟ್ಗಳನ್ನು ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ತಂಡವು 41.3 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು.
ಈ ಮೂಲಕ ಟೀಮ್ ಇಂಡಿಯಾ 41 ರನ್ಗಳಿಂದ ಭರ್ಜರಿ ಜಯ ಸಾಧಿಸಿ, ನಿರೀಕ್ಷೆಯಂತೆ ಇಂದಿನ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ.
ಫೋಟೋ ಕೃಪೆ: BCCI
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….