ಹೊಸಕೋಟೆ: ಮುಡಾ ಹಗರಣ ಹೆಸರಲ್ಲಿ ಬಿಜೆಪಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಗಂಭೀರವಾದ ಆರೋಪಗಳಿಲ್ಲ. ಮುಡಾ ಅಥವಾ ವಾಲ್ಮೀಕಿ ಹಗರಣ ಎನ್ನುತ್ತಿರುವ ವಿಚಾರ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಯಾವುದೇ ಪ್ರಭಾವ ಬೀರಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತಪ್ಪಿಲ್ಲದಿದ್ದರೂ ಮುಡಾ ನಿವೇಶನದ ವಿಚಾರ ಕೆದಕಿ ಬಿಜೆಪಿಯವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಆದರೆ ಡಿಸೆಂಬರ್‌ನಲ್ಲಿ ತನಿಖೆ ಮುಕ್ತಾಯಗೊಳ್ಳಲಿದ್ದು ಸಿದ್ದರಾಮಯ್ಯ ಆರೋಪ ಮುಕ್ತ ರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ನಾಗೇಂದ್ರ ಜೈಲಿನಿಂದ ಬಿಡುಗಡೆ ಯಾಗಿದ್ದು ಇಡಿ ಅಧಿಕಾರಿಗಳು ವಾಲ್ಮೀಕಿ ಪ್ರಕರಣದಲ್ಲಿ ಸಿಎಂ ಹಾಗೂ ಡಿಸಿಎಂ ಹೆಸರು ಹೇಳುವಂತೆ ಒತ್ತಡ ಹಾಕಿರುವ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಐಡಿ, ಇಡಿ, ರಾಜಭವನ, ರಾಜ್ಯಪಾಲರನ್ನು ದುರುಪಯೋಗಪಡಿಸಿ ಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 136 ಸ್ಥಾನಗಳನ್ನು ಪಡೆದು ಪಂಚ ಗ್ಯಾರಂಟಿ ಕೊಡುವ ಮೂಲಕ ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮತ ದಾರರ ಆಶೀರ್ವಾದ ಸದಾಕಾಲ ಇರುತ್ತದೆ ಎಂದರು.
ನ.13ರಂದು ನಡೆಯಲಿರುವ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುಣಾವಣೆಗಳ ಮೇಲೆ ಮುಡಾ ಹಾಗೂ ವಾಲ್ಮೀಕಿ ಪ್ರಕರಣ ಯಾವುದೇ ರೀತಿಯ ಪ್ರಭಾವ ಬೀರಲ್ಲ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುತ್ತಾರೆ ಎಂದು ಶಾಸಕ ಶರತ್ ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.