ಚನ್ನಪಟ್ಟಣ: ಎರಡು ಬಾರಿ ಸೋತಿರುವ ಮಗನಿಗೆ ಪುನರ್ಜನ್ಮ ಬೇಕು ಅಂತಾ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ತಂದು ನಿಲ್ಲಿಸಿದ್ದಾರೆ. ಮಗನನ್ನು ನಿಲ್ಲಿಸಲು ಅವರು ಇಷ್ಟೆಲ್ಲ ಡ್ರಾಮಾ ಮಾಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಆರೋಪಿಸಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಮ್ಮದೇ ಪಕ್ಷದಿಂದ ಚುನಾವಣೆಗೆ ನಿಂತ್ಕಳ್ಳಿ ಅಂದ್ರು. ಚನ್ನಪಟ್ಟಣಕ್ಕೆ ಕರೆದುಕೊಂಡು ಬಂದು ನಾಟಕ ಮಾಡ್ತಾ ಇದ್ದರು.
ಚನ್ನಪಟ್ಟಣ ಜನ ಸ್ವಾಭಿಮಾನಕ್ಕೆ ಮತ ಕೊಡಬೇಕು. ನಾಟಕ, ಸ್ವಾರ್ಥಕ್ಕೆ ಮತ ಕೊಡಬೇಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದನ್ನು ತೆಗೆದಿದ್ದು ಯಾರು? ಯೋಗೇಶ್ವರ್ ಸಾಮರ್ಥ್ಯ ಏನು ಅಂತಾ ಕುಮಾರಸ್ವಾಮಿಗೆ ಗೊತ್ತಿಲ್ವಾ. ನಾವೆಲ್ಲಾ ಒಕ್ಕಲಿಗರಂತೆ ಅವರಿಗೆ ಕಾಣೋಲ್ಲವಾ, ಡಿಕೆ ಶಿವಕುಮಾರ್, ಸುರೇಶ್ ಎಲ್ಲ ಒಕ್ಕಲಿಗರಲ್ವಾ. ಅವರು ಮಾತ್ರ ಒಕ್ಕಲಿಗರಾ, ಕುಮಾರಸ್ವಾಮಿ ಇದೊಂದು ಟ್ರಂಪ್ ಕಾರ್ಡ್ ತಂದು ಚುನಾವಣೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಎರಡು ಬಾರಿ ಸೋತಿದ್ದೇನೆ. ಅವಕಾಶ ಮಾಡಿಕೊಡಿ; ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ ಆಶೀರ್ವಾದದಿಂದಲೇ ದೇವೇಗೌಡರು ಪ್ರಧಾನಮಂತ್ರಿ ಆಗಿದ್ದು ಅನ್ನೋದನ್ನ ಅವರೆಂದೂ ಮರೆಯಬಾರದು. ಕುಮಾರಸ್ವಾಮಿ 25 ಸೀಟುತಗೊಂಡ್ರು ಮುಖ್ಯಮಂತ್ರಿ ಆಗ್ತಾರೆ. ಅವರಿಗೆ ಅದೊಂದು ಅದೃಷ್ಟ ಇದೆ. ಕೊಟ್ಟಿದ್ದನ್ನು ಉಳಿಸಿಕೊಳ್ಳುವ ಶಕ್ತಿ ಅವರಿಗೆ ಇಲ್ಲ.
ನನ್ನ ಜನ್ಮ ಇರೋವರೆಗೂ ಬಿಜೆಪಿ ಸಹವಾಸ ಮಾಡೋಲ್ಲ ಅಂದು ಇವಾಗ ಹೋಗಿದ್ದೀರಲ್ಲ ಎಂದು ಕಿಡಿಕಾರಿದರು. ಹುಟ್ಟಿದ್ರೆ ಇನ್ನೊಂದು ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಅಂದ್ರಲ್ಲ. ಇವಾಗ ಯಾರ ಸಹವಾಸ ಮಾಡಿದ್ದೀರಿ. ಇದೇ ಕೆಲಸ ಯಾರಾದರು ಬಡವರು ಮಾಡಿದ್ರೆ ಎಂತಹ ಮಾತು ಆಡ್ತಾ ಇದ್ರಿ ? ಕುಮಾರಸ್ವಾಮಿ ರಾಜಕೀಯ ಜೀವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿಕೊಂಡ್ರು. ಅವರು ಕುಟುಂಬಕ್ಕೋಸ್ಕರ ಏನು ಬೇಕಾದ್ರು ಮಾಡ್ತಾರೆ ಎಂದು ವಾಗ್ದಾಳಿ ಮಾಡಿದರು.
ನಿಮಗೆ ಒಬ್ಬ ಸ್ವಾಭಿಮಾನಿ ಬೇಕು. ಯೋಗೇಶ್ವರ್ ಗೆಲ್ಲಿಸೋ ಮುಖಾಂತರ ನಿಮ್ಮ ಸ್ವಾಭಿಮಾನ ಉಳಿಸಬೇಕು. ನ.13ರಂದು ನಡೆಯುವ ಚುನಾವಣೆಯಲ್ಲಿ ಹೊರಗಿನ ವರನ್ನು ಜಿಲ್ಲೆಯಿಂದ ಕಳಿಸಬೇಕು. ಯೋಗೇಶ್ವರ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.