ದೊಡ್ಡಬಳ್ಳಾಪುರ: ಕರೊನಾ ವೈರಾಣು ಸೋಂಕು ಪತ್ತೆ ಹಚ್ಚುವಿಕೆ ಹಾಗೂ ಮರಣ ಪ್ರಮಾಣ ತಡೆಗಟ್ಟುವ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಸೋಂಕು ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಹೋಬಳಿ, ತಿಪ್ಪಿಗೊಂಡನಹಳ್ಳಿ ಗ್ರಾಮದಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ತೆರೆಯಲಾಗಿರುವ 150 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿ, ನಂತರ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ ಸಭಾಂಗಣದಲ್ಲಿ, ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
70 ವರ್ಷ ಮೇಲ್ಪಟ್ಟವರು, ಮಧುಮೇಹ, ಬಿಪಿ, ಹೃದಯ ಸಂಬಂಧಿತ ಖಾಯಿಲೆ, ಕ್ಯಾನ್ಸರ್ ಇನ್ನಿತರ ಖಾಯಿಲೆಗಳು ಇರುವವರನ್ನು ಶೀಘ್ರವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ರೋಗದ ಸ್ಥಿತಿ ಕಂಡುಹಿಡಿದು, ಕೊರೋನಾ ಸೋಂಕು ದೃಢಪಟ್ಟಿದ್ದರೆ ಅಂತಹವರಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರಲ್ಲದೆ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳು ಇಳಿಮುಖವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಅಧಿಕಾರಿಗಳು ಇಲ್ಲಿಯವರೆಗೆ ಕಾರ್ಯನಿರ್ವಹಿಸಿದಂತೆಯೇ ಪ್ರಸ್ತುತ ಹಾಗೂ ಮುಂದಿನ ದಿನಗಳಲ್ಲೂ ಕಾರ್ಯನಿರ್ವಹಿಸಬೇಕು ಎಂದರು.
ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ತ್ವರಿತವಾಗಿ ನಡೆಸಬೇಕು. ಪಕ್ಷಾತೀತವಾಗಿ, ಸ್ವಯಂಪ್ರೇರಿತರಾಗಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವ ಹತ್ತು ಜನರನ್ನೊಳಗೊಂಡ ಕೋವಿಡ್-19 ಕಾರ್ಯಪಡೆಯನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಬೇಕು ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿರುವ ಪ್ರತಿ ಆರೋಗ್ಯ ಕೇಂದ್ರಗಳಿಗೂ ಒಂದು ಆ್ಯಂಬುಲೆನ್ಸ್ ವಾಹನ ಸೌಲಭ್ಯ ಒದಗಿಸಲಾಗಿದ್ದು, ರೋಗಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇಲ್ಲಿಯವರೆಗೆ ಹತ್ತು ಕೋಟಿ ಎಪ್ಪತ್ತೊಂದು ಲಕ್ಷ ರೂಪಾಯಿಗಳ ಕೋವಿಡ್-19 ಅನುದಾನ ಬಿಡುಗಡೆಯಾಗಿದ್ದು, ಐದು ಕೋಟಿ ನಲವತ್ತೈದು ಲಕ್ಷ ರೂಪಾಯಿಗಳು ಬಳಕೆಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿನ ಶೇಕಡಾ ಹತ್ತರಷ್ಟು ಅನುದಾನವನ್ನು ಕೋವಿಡ್-19 ಗೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆಗೆ ಯಾವುದೇ ಹಣದ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.
ಪ್ರತಿದಿನ ಕೋವಿಡ್-19 ಸೋಂಕು ದೃಢಪಟ್ಟ ವ್ಯಕ್ತಿಗಳ ವರದಿಯನ್ನು ತಾಲ್ಲೂಕುವಾರು ನೀಡುವ ಬದಲು ಜಿಲ್ಲಾವಾರು ಒಂದೇ ಮಾಹಿತಿಯನ್ನು ನೀಡುವುದು. ಜಿಲ್ಲೆಯ ವರದಿಯಲ್ಲಿ ಪ್ರತ್ಯೇಕವಾಗಿ ಜಿಲ್ಲೆ ಹಾಗೂ ತಾಲ್ಲೂಕು ಮಾಹಿತಿ ಇರಬೇಕು. ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗೆ ನೀಡಬೇಕು. ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಹೊಂದಿರುವ ಸ್ಥಳದ ಆಧಾರದ ಮೇಲೆ ಕೋವಿಡ್-19 ಸೋಂಕು ದೃಢಪಟ್ಟವರ ಮಾಹಿತಿಯನ್ನು ದಾಖಲಿಸಿ ಲೆಕ್ಕವನ್ನು ನೀಡಬೇಕು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೂ ಕೋವಿಡ್-19 ವರದಿಯ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ತೆರೆಯಲಾಗಿರುವ 150 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಅನ್ನು ಕೋವಿಡ್-19 ದೃಢಪಟ್ಟು, ಸೋಂಕಿತ ಲಕ್ಷಣಗಳು ಇಲ್ಲದಿರುವವರಿಗೆ ತೆರೆಯಲಾಗಿದೆ. ವೆಂಟಿಲೇಟರ್, ಐಸಿಯು ಸೇರಿದಂತೆ ಕೋವಿಡ್-19 ಸೋಂಕಿತ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತ್ಯೇಕ ಶೌಚಾಲಯ, ಕಸ ಸಂಸ್ಕರಣಾ ಘಟಕ ವ್ಯವಸ್ಥೆ ಇದೆ. ಕೋವಿಡ್-19 ಪರೀಕ್ಷೆ ಮಾಡಲು ಉತ್ತಮ ವ್ಯವಸ್ಥೆ ಹೊಂದಿದೆ, ಔಷದೋಪಾಚಾರ ವ್ಯವಸ್ಥೆ ಇದೆ. ಈ ಕೋವಿಡ್ ಕೇರ್ ಸೆಂಟರ್‌ನ ಸಂಪೂರ್ಣ ನಿರ್ವಹಣೆಯು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಮ್ಮ, ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎನ್.ನಾಗರಾಜು(ಎಂಟಿಬಿ), ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುಳಾದೇವಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.