ದೊಡ್ಡಬಳ್ಳಾಪುರ: ನವೋದಯ ಚಾರಿಟಬಲ್ ಟ್ರಸ್ಟ್, ಜವಾಹರ್ ನವೋದಯ ವಿದ್ಯಾಲಯ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಗರದ ಹೊರವಲಯದಲ್ಲಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ನವೋದಯ ಉತ್ಸವಕ್ಕೆ ಚಾಲನೆ ನೀಡಲಾಯಿತು.
ನವೋದಯ ಚಾರಿಟಬಲ್ ಟ್ರಸ್ಟ್ ನ 5ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳ ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ಉತ್ಸವಕ್ಕೆ ಚಾಲನೆ ನೀಡಿದರು.
ಈ ಉತ್ಸವ ಜವಾಹರ್ ನವೋದಯ ವಿದ್ಯಾಲಯದ 2022 – 23 ನೇ ಸಾಲಿನ 6 ನೇ ತರಗತಿಯ ಪ್ರವೇಶ ಪರೀಕ್ಷೆಯ ಅಭಿಯಾನ ಮತ್ತು ಅಪೌಷ್ಟಿಕತೆ ನಿರ್ಮೂಲನ ಜಾಗೃತಿ ಉತ್ಸವ ಎಂಬುದಾಗಿದೆ.
ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ, ಅಪೌಷ್ಟಿಕತೆ ನಿರ್ಮೂಲನೆಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಆರ್.ಚಕ್ರವರ್ತಿ ಮಾತನಾಡಿ, 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಕೂಡ ನವೋದಯ ಪ್ರವೇಶ ಪರೀಕ್ಷೆಯ ಬಗ್ಗೆ ಮಾಹಿತಿ ತಲುಪಿಸುವ ಉದ್ದೇಶ ಈ ಉತ್ಸವದ್ದಾಗಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವಿಶ್ವಾಸವಿದೆ ಹಾಗೂ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅನುಭವ ಬರಲಿದೆ. ಅಲ್ಲದೆ ಕೇಂದ್ರ ಸರ್ಕಾರದ ನಿಯಮದಂತೆ ಅಪೌಷ್ಟಿಕತೆ ನಿರ್ಮೂಲನಕ್ಕೆ ಮಾಹಿತಿ ದೊರಕಲಿದೆ ಎಂದರು.
ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನವೋದಯ ಚೇತನ್ ಮಾತನಾಡಿ, ಇತ್ತೀಚಿಗೆ ಸಮುದಾಯದಲ್ಲಿ ಬರುತ್ತಿರುವ ಹೊಸ ಕಾಯಿಲೆಗಳನ್ನು ಎದುರಿಸಲು ಪೌಷ್ಟಿಕ ಆಹಾರ ಅತಿ ಹೆಚ್ಚು ಮುಖ್ಯವಾಗಿದೆ. ಈ ಅಭಿಯಾನದಲ್ಲಿ ಪ್ರತಿ ಹಳ್ಳಿಯ ಮಕ್ಕಳಲ್ಲಿ ಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸುತ್ತೇವೆ ಅದರ ಜೊತೆಯಲ್ಲಿ 6ನೇ ತರಗತಿಗೆ ಅತಿ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಕ್ರಮ ಸಂಯೋಜಕ ಜನಾರ್ಧನ್, ಸದಸ್ಯ ಕಾರ್ತಿಕ್ ಗೌಡ, ವೈ.ಟಿ.ಲೋಹಿತ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….