ದೊಡ್ಡಬಳ್ಳಾಪುರ: ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‍ನ ವತಿಯಿಂದ 48ನೇ ವರ್ಷದ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ನೆರವೇರಿತು.
ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಶ್ರೀ ಗಣ ಹೋಮ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಗಣೇಶ ಹಾಗೂ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಅಯ್ಯಪ್ಪ ವ್ರತಧಾರಿಗಳಿಂದ ಸಾಮೂಹಿಕ ಭಜನೆ ನಡೆಯಿತು.ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಆಶೀರ್ವಚನ ನೀಡಿ, ಶಾಂತಿ, ನೆಮ್ಮದಿಯ ಬದುಕಿಗಾಗಿ ಸತ್ಸಂಗ, ಶಿಸ್ತು ಹಾಗೂ ಭಕ್ತಿ ಪ್ರಮುಖ ಪಾತ್ರವಹಿಸುತ್ತವೆ. ಬಾಹ್ಯ ಶ್ರೀಮಂತಿಕೆಗಿಂತ ಅಂತರಿಕ ಶ್ರೀಮಂತಿಕೆ ಮುಖ್ಯವಾಗಿದ್ದು, ಎಲ್ಲ ಜೀವಿಗಳಲ್ಲಿಯೂ ದೇವರನ್ನು ಕಾಣಬೇಕು. ಹಣವೊಂದೇ ಎಲ್ಲಾ ತೃಪ್ತಿಯನ್ನು ನೀಡುವುದಿಲ್ಲ. ಆದ್ಯಾತ್ಮಕತೆ ನಮ್ಮ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಎಲ್ಲವನ್ನೂ ಬಯಸಲು ಆಸೆ ಪಟ್ಟು ನೆಮ್ಮದಿ ಕಳೆದುಕೊಳ್ಳುವುದಕ್ಕಿಂತ ಇರುವುದರಲ್ಲಿ ನೆಮ್ಮದಿ ಕಾಣಬೇಕು. ಸೇವಾ ಮನೋಭಾವ, ಸಮಾಜಮುಖಿ ಚಿಂತನೆಗಳಿಂದ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಿದೆ. ನಮ್ಮ ಸಂಸ್ಕೃತಿ, ಆಚರಣೆಗಳ ಅರಿವನ್ನು ಮೂಡಿಸಬೇಕಾದರೆ ಮಕ್ಕಳಿಗೆ ಆದ್ಯಾತ್ಮಿಕ ತಿಳುವಳಿಕೆ, ಸಂಸ್ಕಾರ ಕಲಿಸಬೇಕಿದೆ ಎಂದರು.
ಇದೇ ವೇಳೆ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ಹೊರತಂದಿರುವ 2022ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ವಲಯ ಉಪವಿಭಾಗಾಕಾರಿ ರಂಗನಾಥ್, ಶ್ರೀ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಬಿ.ವಿ.ಬಸವರಾಜು, ಗಣ್ಯರಾದ ವೀರಭದ್ರಯ್ಯ, ಪಿ.ಸಿ.ಪುಟ್ಟರುದ್ರಪ್ಪ ಸೇರಿದಂತೆ ಸಮಿತಿಯ ಸದಸ್ಯರು ಭಕ್ತಾದಿಗಳು ಮಂಡಲ ಪೂಜೆಯಲ್ಲಿ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….