ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿವೃಷ್ಟಿ/ಪ್ರವಾಹದಿಂದ ಉಂಟಾಗಿರುವ ಹಾನಿಯ ಸರ್ವೇಕ್ಷಣೆ ನಡೆಸಲು ಜಿಲ್ಲೆಗೆ ಆಗಮಿಸಿರುವ ಕೇಂದ್ರ ವಿಪತ್ತು ಅಧ್ಯಯನ ತಂಡದ (Inter Ministerial Central Team) ಮುಖ್ಯಸ್ಥರಾದ ಸುಶಿಲ್ ಪಾಲ್(ಮುಖ್ಯ ನಿಯಂತ್ರಕರು, ಲೆಕ್ಕಪತ್ರ, ಭಾರತ ಸರ್ಕಾರ), ಸದಸ್ಯರಾದ ಸುಭಾಷ್ ಚಂದ್ರ (ನಿರ್ದೇಶಕರು, ಕೃಷಿ ಇಲಾಖೆ, ಭಾರತ ಸರ್ಕಾರ) ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಳೆದ ಅಕ್ಟೋಬರ್ ಮಾಹೆಯಿಂದ ಜಿಲ್ಲೆಯಲ್ಲಿ ಅತಿವೃಷ್ಠಿ(ಮಳೆ ಹಾನಿ)ಯಿಂದ ಸಂಭವಿಸಿರುವ ಹಾನಿ ಕುರಿತು ಪಿ.ಪಿ.ಟಿ. ಮೂಲಕ ಅಂಕಿ ಅಂಶಗಳು ಹಾಗೂ ವಿಡಿಯೋ ತುಣುಕುಗಳ ಸಮೇತ ಸಮಗ್ರವಾಗಿ ತಂಡಕ್ಕೆ ಮಾಹಿತಿ ನೀಡಿದರು. ಈ ವಿಡಿಯೋ ತುಣುಕುಗಳನ್ನು ಹಾಗೂ ಛಾಯಾಚಿತ್ರಗಳನ್ನು ಮಳೆ ಹಾನಿ ಸಂಭವಿಸಿದ್ದ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಂಗ್ರಹಿಸಿತ್ತು.
ಸಭೆಗೂ ಮುನ್ನ ಸಭಾಂಗಣದ ಹೊರಗಡೆ ನಿರ್ಮಿಸಿದ್ದ ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ಮಳೆ ಹಾನಿ ಬಗ್ಗೆ ವಿವರಿಸಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ತಂಡದ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಜ್ಯ ಕೆಎಸ್‌ಡಿಎಂಎ ಆಯುಕ್ತರಾದ ಡಾ.ಮನೋಜ್ ರಾಜನ್, ಅಪರ ಕೃಷಿ ನಿರ್ದೇಶಕರಾದ ಬಿ.ಬಸವರಾಜು, ಅಪರ ತೋಟಗಾರಿಕಾ ನಿರ್ದೇಶಕರಾದ ಬಿ.ಕೆ.ದುಂಡಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ರೇವಣಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ, ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….