ಚಿಕ್ಕಬಳ್ಳಾಪುರ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ಟಾಪ್ ಟೆನ್ ನಗರಗಳ ಪಟ್ಟಿಯಲ್ಲಿ ರಾಷ್ಟ್ರದಲ್ಲಿಯೇ ಚಿಕ್ಕಬಳ್ಳಾಪುರ ನಗರ ನಾಲ್ಕನೇ ಸ್ಥಾನವನ್ನು ಗಳಿಸಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಅವರು ಭಾನುವಾರ ಈ ಕುರಿತು ಮಾಧ್ಯಮಗಳಿಗೆ ವಿವರನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ದೇಶದ ವಿವಿಧ ನಗರಗಳಲ್ಲಿನ “ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರ”ಗಳಲ್ಲಿ ದಾಖಲಾಗುವ ಧೂಳಿನ ಕಣಗಳ ಸಾಂದ್ರತೆ ಹಾಗೂ ಇತರ ಅಂಕಿ-ಅಂಶಗಳನ್ನು ಆಧರಿಸಿ ದೇಶದ ಎಲ್ಲಾ ನಗರಗಳಲ್ಲಿನ ಶುದ್ಧ ಗಾಳಿಯ ಗುಣಮಟ್ಟದ ಪ್ರಮಾಣವನ್ನು ಆಗಿಂದಾಗ್ಗೆ ನಿಯಮಿತವಾಗಿ ಸಮೀಕ್ಷೆ ಮಾಡಿ ವರದಿಯನ್ನು ಪ್ರಕಟಿಸುತ್ತಿರುತ್ತದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರವನ್ನು ಸ್ಥಾಪಿಸಿರುತ್ತದೆ. ಈ ಮಾಪನ ಕೇಂದ್ರದ ಮಾಹಿತಿಯನ್ನು ಒಳಗೊಂಡಂತೆ ದೇಶದ ಎಲ್ಲಾ ನಗರಗಳಲ್ಲಿನ ಮಾಪನ ಕೇಂದ್ರಗಳ ಕಳೆದ ನವೆಂಬರ್ 24ರ ವರೆಗಿನ ಮಾಹಿತಿಯನ್ನು ವಿಶ್ಲೇಷಿಸಿ 2021- 22ನೇ ಸಾಲಿಗೆ ಸಂಬಂಧಿಸಿದಂತೆ ಪ್ರಸ್ತುತ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿರುವ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ನಗರ ರಾಷ್ಟ್ರದಲ್ಲಿಯೇ ನಾಲ್ಕನೇ ಸ್ಥಾನವನ್ನು ಗಳಿಸಿದೆ .ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ 7ನಗರಗಳು ಸ್ಥಾನ ಗಿಟ್ಟಿಸಿ ಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
2020- 21ನೇ ಸಾಲಿನಲ್ಲಿ ಶುದ್ಧ ಗಾಳಿಯ ಗುಣಮಟ್ಟದ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ನಗರ 7ನೇ ಸ್ಥಾನದಲ್ಲಿತ್ತು ಈ ವರ್ಷ 4ನೇ ಸ್ಥಾನಕ್ಕೆ ಜಿಗಿದಿದೆ. 2019-20 ನೇ ಸಾಲಿನಿಂದ ಜಿಲ್ಲಾಡಳಿತ ಕೈಗೊಂಡಿರುವ ಕೆಲವು ಸಕಾರಾತ್ಮಕ ಕ್ರಮಗಳಿಂದ ಈ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿದೆ. ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ರಸ್ತೆಗಳ ಇಕ್ಕೆಲಗಳು, ಗೋಮಾಳ ಗುಣಿತೋಪು ಸೇರಿದಂತೆ ಸರ್ಕಾರಿ ಜಮೀನುಗಳಲ್ಲಿ 2019-20 ನೇ ಸಾಲಿನಲ್ಲಿ ದಾಖಲೆಯ ಪ್ರಮಾಣದಲ್ಲಿ 6 ಲಕ್ಷಕ್ಕೂ ಅಧಿಕ ಗಿಡಮರಗಳನ್ನು ನೆಟ್ಟು ಬೆಳೆಸಿ ಹಸಿರೀಕರಣಗೊಳಿಸಿದ್ದು ಜೊತೆಗೆ ನಗರಸಭೆಯಿಂದ ಘನ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವನ್ನು ಮನೆಯಿಂದಲೇ ಪ್ರತ್ಯೇಕಿಸಿ ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ವೈಜ್ಙಾನಿಕವಾಗಿ ವಿಲೇವಾರಿ ಮಾಡಿದ್ದು ಹಾಗೂ ಬೇಸಿಗೆ ಕಾಲದಲ್ಲಿ ನಗರದ ರಸ್ತೆಗಳಿಗೆ ನೀರು ಸಿಂಪಡಿಸುವ ಮೂಲಕ ಧೂಳಿನ ಕಣಗಳನ್ನು ತಡೆಗಟ್ಟಿದ್ದು ಸಹ ಈ ಸಾಧನೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಮಾರ್ಗದರ್ಶನ ಹಾಗೂ ಸಹಕಾರ ನೀಡಿದ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಹಾಗೂ ಜಿಲ್ಲಾಡಳಿತದ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವಾಯು ಮಾಲಿನ್ಯ ಪ್ರಮಾಣ ಅತ್ಯಂತ ಕಡಿಮೆ ಇರುವ ಹಾಗೂ ಶುದ್ಧ ಗಾಳಿ ಹೊಂದಿರುವ ನಗರಗಳ ಪೈಕಿ ಗದಗ ನಗರ ಮೊದಲನೇ ಸ್ಥಾನ, ಮಡಿಕೇರಿ ಎರಡನೇ ಸ್ಥಾನ , ಚಿಕ್ಕಬಳ್ಳಾಪುರ ನಾಲ್ಕನೇ ಸ್ಥಾನ, ಹಾಸನ ಐದನೇ ಸ್ಥಾನ ಮತ್ತು ಚಾಮರಾಜನಗರ, ಚಿಕ್ಕಮಗಳೂರು ಯಾದಗಿರಿ ನಗರಗಳು ಕ್ರಮವಾಗಿ 7,8 ಮತ್ತು 9ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡಿವೆ .ಈ 7 ನಗರಗಳ ಪೈಕಿ ರಾಜಧಾನಿ ಬೆಂಗಳೂರಿಗೆ ಅತೀ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ನಗರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಕ್ರಿಯೆ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ “ವಾಯು ಮಾಲಿನ್ಯ ಕಡಿಮೆ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ಟಾಪ್ ಟೆನ್ ನಗರಗಳ ಪಟ್ಟಿಯಲ್ಲಿ ರಾಷ್ಟ್ರದಲ್ಲಿಯೇ ಚಿಕ್ಕಬಳ್ಳಾಪುರ ನಗರ ನಾಲ್ಕನೇ ಸ್ಥಾನವನ್ನು ಗಳಿಸಿರುವುದು ಹರ್ಷದಾಯಕವಾದ ವಿಚಾರವಾಗಿದೆ ” ಈ ಸಾಧನೆಗೈಯಲು ಸಹಕಾರ ನೀಡಿದ ಜಿಲ್ಲೆಯ ಸಮಸ್ತ ನಾಗರಿಕರಿಗೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು.
ಈ ವರ್ಷ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿರುವುದರಿಂದ ಹೆಚ್ಚು ಮರ ಗಿಡಗಳನ್ನು ಬೆಳೆಸಲು ವಾತಾವರಣ ಪೂರಕವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇನ್ನಷ್ಟು ಹಸಿರೀಕರಣ ಕಾರ್ಯಗಳನ್ನು ಕೈಗೊಂಡು ಗುಣಮಟ್ಟದ ಶುದ್ಧ ಗಾಳಿಯನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ನಗರ ಮೊದಲ ಸ್ಥಾನ ಗಳಿಸಬೇಕು ಹಾಗೂ ಜಿಲ್ಲೆಯ ಇತರ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಬೇಕು ಆ ನಿಟ್ಟಿನಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು,ಅರಣ್ಯ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….