ಬೆಂ.ಗ್ರಾ.ಜಿಲ್ಲೆ: ಜೀವನಕ್ಕಿಂತ ಜೀವ ಮುಖ್ಯವಾಗಿದ್ದು, ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿರುವುದರಿಂದ, ಜಿಲ್ಲೆಯ ಜನತೆ ಕೋವಿಡ್-19 ಲಸಿಕೆಯನ್ನು ಪಡೆದು, ಅಗತ್ಯ ಮುನ್ನಚ್ಚರಿಕಾ ನಿಯಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿರಬೇಕೆಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು(ಎಂ.ಟಿ.ಬಿ) ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಭಾಂಗಣದಲ್ಲಿಂದು ನಡೆದ “ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರಧನದ ಚೆಕ್ನ್ನು ವಿತರಣಾ ಕಾರ್ಯಕ್ರಮ” ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ಅತಿ ಕಡಿಮೆ ಅವಧಿಯಲ್ಲಿ ವೇಗವಾಗಿ ಪಸರಿಸುವ ಮೂಲಕ, ಜನತೆಗೆ ಆತಂಕ ಸೃಷ್ಟಿಸಿದ್ದು, ಜಿಲ್ಲೆಯ ಜನತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಧೈರ್ಯದಿಂದ ಇರಬೇಕು ಎಂದು ಹೇಳಿದರು.
ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿ.ಪಿ.ಎಲ್. ಕುಟುಂಬಕ್ಕೆ ರಾಜ್ಯ ಸರ್ಕಾರವು ನೀಡುತ್ತಿರುವ ರೂ. 1 ಲಕ್ಷಗಳ ಪರಿಹಾರವನ್ನು, ಎ.ಪಿ.ಎಲ್. ಕುಟುಂಬದವರಿಗೂ ನೀಡಲು ಸರ್ಕಾರಕ್ಕೆ ಮನವಿ ಮಾಡಿ, ಪೂರಕವಾಗಿ ಸ್ಪಂದಿಸುವುದಾಗಿ ತಿಳಿಸಿದರಲ್ಲದೆ, ಆಧಾರ್ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ ತಪ್ಪಾಗಿ ನೀಡಿರುವ ಮೃತ ಕುಟುಂಬದ ವಾರಸುದಾರರು ಸರಿಯಾದ ಮಾಹಿತಿ ನೀಡಿ, ಪರಿಹಾರ ಪಡೆಯುವಂತೆ ತಿಳಿಸಿದರು.
ದೇಶದಲ್ಲಿ 120 ಕೋಟಿ ಜನತೆಗೆ ಈಗಾಗಲೇ ಲಸಿಕಾಕರಣವಾಗಿದ್ದು, ರಾಜ್ಯದಲ್ಲಿ 5 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಶೇ. 94ರಷ್ಟು ಲಸಿಕಾಕರಣ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಿಗೆ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಆಕ್ಸಿಜನ್, ರೆಮ್ಡಿಸಿವಿರ್ ಇಂಜೆಕ್ಷನ್ಗಳ ಕೊರತೆಯ ಸಂದರ್ಭದಲ್ಲೂ, ಪೂರೈಕೆಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೈಗೊಂಡ ಕಾರ್ಯಗಳು ಸ್ಮರಣೀಯ ಎಂದು ಹೇಳಿದರು.
ಅತಿವೃಷ್ಟಿಯಿಂದ ಉಂಟಾದ ಮಳೆ ಹಾನಿ ಕುರಿತಂತೆ ಈಗಾಗಲೇ 2 ಕೋಟಿ 53 ಲಕ್ಷಗಳ ಪರಿಹಾರ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಕೋವಿಡ್ ಸೋಂಕಿನಿಂದ ಈಗಾಗಲೇ ಸಾಕಷ್ಟು ಬಳಲಿದ್ದು, ಕೋವಿಡ್-19 ಸೋಂಕಿನಿಂದ ಮೃತರಾದ ಕುಟುಂಬದ ವಾರಸುದಾರರಿಗೆ ಮಾನವೀಯ ದೃಷ್ಟಿಯಿಂದ ಈ ಪರಿಹಾರ ನೀಡಲಾಗುತ್ತಿದೆ ಎಂದರಲ್ಲದೆ, ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರವು ಬಿ.ಪಿ.ಎಲ್. ಕುಟುಂಬದವರಿಗೆ ನೀಡುತ್ತಿರುವ ಪರಿಹಾರದಂತೆಯೇ, ಮೃತ ವ್ಯಕ್ತಿಯ ಎ.ಪಿ.ಎಲ್. ಕುಟುಂಬದ ವಾರಸುದಾರರಿಗೂ ಪರಿಹಾರ ನೀಡಲು ಸಚಿವರಿಗೆ ಮನವಿ ಮಾಡಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. ಅವರು ಮಾತನಾಡಿ, ಯಾವುದೇ ಮುನ್ಸೂಚನೆ ಇಲ್ಲದೆ, ದಿಢೀರ್ ಎಂದು ದೇಹವನ್ನು ಪ್ರವೇಶಿಸುವ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತ ವ್ಯಕ್ತಿಯ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರಲ್ಲದೆ, ಕೋವಿಡ್ನ ರೂಪಾಂತರಿ ತಳಿ ಒಮಿಕ್ರಾನ್ ಕುರಿತು ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ಕುಮಾರ್ ಬಚ್ಚೇಗೌಡ ಅವರು ಮಾತನಾಡಿ, ಕೋವಿಡ್-19 ಸೋಂಕಿನಿಂದ ಹೊಸಕೋಟೆ ವ್ಯಾಪ್ತಿಯಲ್ಲಿ ಸುಮಾರು 400 ಜನರು ಮೃತರಾಗಿದ್ದು, ಕೋವಿಡ್-19 ದುರ್ಬಲ ವರ್ಗದವರ ಮೇಲೆಯೇ ಹೆಚ್ಚು ತೀವ್ರತೆ ತೋರಿದ್ದು ವಿಷಾದನೀಯ ಸಂಗತಿ ಎಂದರಲ್ಲದೆ, ಕರೊನಾ ವಾರಿಯರ್ಸ್ಗಳ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೋವಿಡ್-19ರ ಸೋಂಕಿನಿಂದ ಮೃತರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 371 ಕುಟುಂಬದವರಿಗೆ ರೂ. 3 ಕೋಟಿ 71 ಲಕ್ಷಗಳ ಪರಿಹಾರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ಪುರಸಭೆ ಅಧ್ಯಕ್ಷೆ ರೇಖಾ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣ್ಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಮಹೇಶ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ್, ತಹಶೀಲ್ದಾರ್ಗಳು, ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ವಾರಸುದಾರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….