ದೊಡ್ಡಬಳ್ಳಾಪುರ, (ಜೂ.19): ವಿದ್ಯುತ್ ದರ ಏರಿಕೆ ಹಾಗೂ ವಿದ್ಯುತ್ ಬಿಲ್‍ಗಳಲ್ಲಿ ಅನಗತ್ಯ ಶುಲ್ಕಗಳನ್ನು ವಿಧಿಸಿರುವುದನ್ನು ಖಂಡಿಸಿ, ವಿದ್ಯುತ್ ಚಾಲಿತ ಮಗ್ಗಗಳ ನೇಕಾರ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ನಗರದ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಬೆಸ್ಕಾಂ ಅಕಾರಿಗಳ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವಿದ್ಯುತ್ ಚಾಲಿತ ಮಗ್ಗಗಳ ನೇಕಾರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ವಿದ್ಯುತ್ ದರ ಏರಿಕೆಯನ್ನು ತಕ್ಷಣ ರದ್ದು ಮಾಡಬೇಕು. ನೇಕಾರರು ಬಳಸುವ ಒಂದು ಎಚ್.ಪಿ ವಿದ್ಯುತ್ ಬೆಲೆ ರೂ.80 ರಿಂದ 140 ರವರೆಗೆ ಏರಿಕೆಯಾಗಿದೆ. ಗೃಹಬಳಕೆಯ ವಿದ್ಯುತ್ ದರವೂ ಸಹ ಹೆಚ್ಚಿಸಿರುವುದು ಖಂಡನೀಯ. ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ನೇಕಾರರು, ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ಪ್ರತಿ ಯೂನಿಟ್ ವಿದ್ಯುತ್ ದರ ಹೆಚ್ಚಳ ಮಾಡಿರುವುದು, ನಿಗದಿತ ಶುಲ್ಕ, ಹೊಂದಾಣಿಕೆ ಶುಲ್ಕ ಮೊದಲಾಗಿ ಅನಗತ್ಯ ಶುಲ್ಕಗಳನ್ನು ಹಾಕಿರುವುದು ಕೂಡಲೇ ರದ್ದಾಗಬೇಕು. ಬೆಲೆ ಇಳಿಸದಿದ್ದಲ್ಲಿ ರಾಜ್ಯಾದ್ಯಾಂತ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡ ಜಾಗೃತ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜ್ ಮಾತನಾಡಿ, ಸರ್ಕಾರದ ಉಚಿತ ಯೋಜನೆಗಳು ಜನರನ್ನು ಹಾಳು ಮಾಡುತ್ತಿವೆ. ತಾಲೂಕಿನಲ್ಲಿ 45 ಸಾವಿರ ನೇಕಾರ ಕುಟುಂಬಗಳಿದ್ದು , ಇವರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ವಿದ್ಯುತ್ ದರ ಏರಿಕೆ ಸೇರಿದಂತೆ ರೀತಿಯ ಸಮಸ್ಯೆಗಳ ಇತ್ಯರ್ಥಕ್ಕೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಬೇಡಿಕೆಗಳು: ನೇಕಾರಿಕೆ ಉದ್ಯೋಗಕ್ಕಾಗಿ ಸರ್ಕಾರ ರೂಪಿಸಿರುವ ವಿಶೇಷ ಯೋಜನೆಯಡಿ 25 ಪೈಸೆ ದರದಲ್ಲಿ ವಿದ್ಯುತ್ ಪೂರೈಸಿ ಬಿಲ್ ನೀಡಬೇಕು. ನೇಕಾರಿಕೆ ಮೀಟರ್ ಕನಿಷ್ಠ ಶುಲ್ಕ ಏರಿಕೆ ಹಾಗೂ ಎಫ್.ಎ.ಸಿ. ಶುಲ್ಕವನ್ನು ತಕ್ಷಣ ರದ್ದುಗೊಳಿಸಬೇಕು ಹೊಂದಾಣಿಕೆ ಶುಲ್ಕ ಇತರೆ ಶುಲ್ಕಗಳನ್ನು ರದ್ದುಗೊಳಿಸಬೇಕು. ಕೆಟ್ಟು ಹೋಗಿರುವ ಮೀಟರ್‍ಗಳಿಗೆ ಯಾವುದೇ ಶುಲ್ಕ ವಿಸದೇ ತಕ್ಷಣ ಬದಲಾವಣೆ ಮಾಡಿಕೊಡಬೇಕು. ಹೆಚ್ಚಾಗಿರುವ ಎಚ್.ಪಿ.ಯನ್ನು ಕಡಿಮೆ ಮಾಡಿಕೊಳ್ಳಲು ಯಾವುದೇ ಶುಲ್ಕ ಪಡೆಯಬಾರದು. ಆರ್.ಆರ್ ಸಂಖ್ಯೆಯಲ್ಲಿ ನಮೂದಾಗಿರುವ ವ್ಯಕ್ತಿಯು ಮರಣ ಹೊಂದಿದ್ದಲ್ಲಿ ಅವರ ಹೆಸರನ್ನು ತೆಗೆದು ಕುಟುಂಬದ ಸದಸ್ಯರ ಹೆಸರಿಗೆ ವರ್ಗಾವಣೆ ಮಾಡಿಕೊಡಬೇಕು. ನೇಕಾರಿಕೆ ಕುಟುಂಬಗಳಿಗೆ ಬಿಲ್ ನೀಡಿದ ದಿನದಿಂದ 30 ದಿನಗಳವರೆಗೆ ಪಾವತಿಗೆ ಗಡುವು ಕೊಡಬೇಕು ಗೃಹಬಳಕೆ ವಿದ್ಯುತ್ ಸ್ಲ್ಯಾಬ್ 50 ಯೂನಿಟ್‍ಗಳಿಂದ ಪ್ರಾರಂಭಿಸಬೇಕು ಎನ್ನುವ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಬೆಸ್ಕಾಂ ಸಹಾಯಕ ಅಭಿಯಂತರ ಮಂಜುನಾಥ್, ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರುವಂತೆ ವಿದ್ಯುತ್ ದರಗಳನ್ನು ಪರಿಸ್ಕರಿಸಲಾಗಿದ್ದು, ಇದು ರಾಜ್ಯದಾದ್ಯಂತ ನಡೆದಿರುವ ಪ್ರಕ್ರಿಯೆಯಾಗಿದೆ. ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಕಾರಣದಿಂದಾಗಿ ಆದೇಶವನ್ನು ತಡೆ ಹಿಡಿಯಲಾಗಿತ್ತು.
ಮೇ 12ರಿಂದ ಜಾರಿಗೆ ಬರುವಂತೆ ಹೊಸ ವಿದ್ಯುತ್ ದರಗಳನ್ನು ನಿಗದಿ ಪಡಿಸಲಾಗಿದೆ. ಸರ್ಕಾರದ ಗೃಹ ಜ್ಯೋತಿ ಯೋಜನೆ ಆಗಸ್ಟ್ ನಿಂದ ಜಾರಿಗೆ ಬರಲಿದ್ದು, ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಗೃಹಜ್ಯೋತಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಯಾರ ಹಸ್ತಕ್ಷೇಪ ಇಲ್ಲದಂತೆ ವರ್ಷದ ವಿದ್ಯುತ್ ಬಿಲ್‍ನ ಸರಾಸರಿ ಕಂಪ್ಯೂಟರ್ ಪತ್ತೆ ಹಚ್ಚಿ ನಿಗದಿಪಡಿಸುವ ಸಾಪ್ಟ್‌ವೇರ್ ರೂಪಿಸಲಾಗಿದೆ. ವಿದ್ಯುತ್ ದರ ಹೆಚ್ಚಾಗಿರುವ ಬಗ್ಗೆ ನಮಗೂ ಖೇದವಿದೆ. ನೇಕಾರರ ಸಹಾಯಧನ ಕಡಿತ ಮಾಡಿಲ್ಲ. ಇದು ಮೊದಲಿನಂತೆಯೇ ಇದೆ.
ಕಾಸಿಯಾ ಜೂ.22ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಮುಖ್ಯಮಂತ್ರಿಗಳಿಂದ ಸೂಕ್ತ ಪರಿಹಾರ ದೊರೆಯುವ ಭರವಸೆಯಿದೆ. ಆರ್.ಆರ್.ಸಂಖ್ಯೆ ವರ್ಗಾವಣೆಗೆ ಗುತ್ತಿಗೆದಾರರ ಅವಶ್ಯಕತೆ ಇಲ್ಲದೇ ನೇರ ಅಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲಾತಿ ನೀಡಿದರೆ ವರ್ಗಾಯಿಸಲಾಗುವುದು. ಇಂದಿನ ಮನವಿಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಗೆ ಕನ್ನಡ ಪಕ್ಷ, ಕನ್ನಡ ಜಾಗೃತ ವೇದಿಕೆ, ಕರವೇ (ಶಿವರಾಮೇಗೌಡ ಬಣ), ಪದ್ಮಶಾಲಿ ಸಂಘ, ಕಲ್ಪತರು ಸೊಸೈಟಿ, ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘ, ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಸಂಘಟನೆಗಳು ಬೆಂಬಲಿಸಿದ್ದವು.
ಪ್ರತಿಭಟನೆಯಲ್ಲಿ ಸಂಘದ ವಿದ್ಯುತ್ ಚಾಲಿತ ನೇಕಾರ ಕೂಲಿಕಾರ್ಮಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಾನಕಿರಾಮ, ಖಜಾಂಚಿ ಬಿ.ಎಸ್.ಮಂಜುನಾಥ್, ಸಹಕಾರ್ಯದರ್ಶಿ ಕಮಲ್ ಹಾಸನ್, ಸುಬ್ರಮಣ್ಯ, ರಾಜೇಶ್, ಕೆ.ಪಿ.ಪ್ರಕಾಶ್ ರಾವ್, ರಾಮಕೃಷ್ಣ, ಕಲ್ಪತರು ನೇಕಾರ ಸೊಸೈಟಿಯ ಪಿ.ಸಿ.ವೆಂಕಟೇಶ್, ನಗರಸಭೆ ಸದಸ್ಯರಾದ ಪದ್ಮನಾಭ್ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಕಾರ್ಯದರ್ಶಿ ಬಿ.ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….